ಕನ್ನಡ ಸಾಹಿತ್ಯದ ಇತಿಹಾಸ|ಪ್ರಾಚೀನತೆ,ಅಧ್ಯಯನ ಕ್ರಮಗಳು.

ಕನ್ನಡ ಸಾಹಿತ್ಯದ ಉದಯವು ಕನ್ನಡ ಭಾಷೆಯ ಉದಯದೊಡನೆ ಆಗಿದೆ. ರಸಾನುಭವದ ಸುಂದರವಾದ ಅಭಿವ್ಯಕ್ತಿಯೇ ಸಾಹಿತ್ಯ. ಸಾಹಿತ್ಯದ ಈ ಮೂಲ ಸತ್ವವು ಅಭಿವ್ಯಕ್ತಿಯ ಸಾಧನವಾದ ಭಾಷೆಯಲ್ಲಿಯೂ ಇರುತ್ತದೆ. ಇದಕ್ಕೆ ಮೂಲವಾದ ಸೌಂದರ್ಯ ಪ್ರಜ್ಞೆ ಮನುಷ್ಯನಷ್ಟು ಪ್ರಾಚೀನವಾಗಿದೆ. ಒಂದೊಂದು ಭಾಷೆಯ ನಿರ್ಮಾಣದಲ್ಲೂ ಅದು ತಲೆದೋರಿದೆ. ಇಂದಿನ ಭಾಷೆಗಿಂತ ತೀರ ಹಿಂದಿನ ಭಾಷೆ ಹೆಚ್ಚು ಕಾವ್ಯಮಯವಾಗಿತೆಂದು ಅರಿತವರು ತೋರಿದ್ದಾರೆ. ಒಂದು ವರ್ಣದಲ್ಲಿ ಇಲ್ಲವೇ ಶಬ್ದದಲ್ಲಿ ಒಂದು ಕವನ ಇಲ್ಲವೇ ಗ್ರಂಥದಲ್ಲಿರುವಂತಹ ಸ್ವಾರಸ್ಯವನ್ನು ಗುರುತಿಸಬಹುದು. ಹೀಗೆ ಒಂದು ಕಾಲಕ್ಕೆ ಭಾಷೆ ಸಾಹಿತ್ಯವಾಗಿತ್ತು.

ಮಾನವನ ಪ್ರತಿಯೊಂದು ಅನುಭವಕ್ಕೂ ಒಂದು ಇತಿಹಾಸವಿರುವಂತೆ ಮಾನವ ನಿರ್ಮಿತ ಸಾಹಿತ್ಯಕ್ಕೂ ಒಂದು ಇತಿಹಾಸವಿದೆ. ಆದ ಕಾರಣ ಸಾಹಿತ್ಯವನ್ನು ಅರಿತರೆ ಮಾತ್ರ ಸಾಲದು ಅ ಸಾಹಿತ್ಯಕ್ಕೆ ಇರುವ ಚರಿತ್ರೆಯನ್ನು ಅರಿಯಬೇಕು. ಇದನ್ನು ಅರಿಯಲು ಆಧಾರಗಳು ಅವಶ್ಯಕ. ಕೆಲವೊಮ್ಮೆ ಆಧಾರಗಳು ಸಿಗದೇ ಹೋಗಬಹುದು. ಇದರಿಂದ ಭಾಷೆಯ ಸಾಹಿತ್ಯ ಚರಿತ್ರೆಯನ್ನು ಕ್ರಮವಾಗಿ ನಿರೂಪಿಸಲು ಅಸಾಧ್ಯವಾಗುತ್ತದೆ. ಆದ್ದರಿಂದ ಸಾಹಿತ್ಯ ಚರಿತ್ರೆಗೆ ಮುಖ್ಯ ಆಧಾರವೆಂದರೆ ಆ ಭಾಷೆಯಲ್ಲಿರುವ ಗ್ರಂಥ ಸಮುದಾಯ. ಇಂತಹ ಒಂದು ಗ್ರಂಥ ಸಮುದಾಯದ ವ್ಯವಸ್ಥಿತ ಅಧ್ಯಯನವೇ ಸಾಹಿತ್ಯ ಚರಿತ್ರೆ.

ಪ್ರೊಫೆಸರ್ ಡಿ.ಎಲ್. ನರಸಿಂಹಾಚಾರ್ ಅವರು ‘ಸಾಹಿತ್ಯ ಚರಿತ್ರೆಯ ಸ್ವರೂಪ ಎಂಬ ಲೇಖನದಲ್ಲಿ ಸಾಹಿತ್ಯ ಬೆಳೆದು ಬಂದ ರೀತಿ ಆಗಿರುವ ಬದಲಾವಣೆಗಳು ಅದಕ್ಕೆ ಕಾರಣಗಳು ಅದರಿಂದ ಸಾಹಿತ್ಯ ಮತ್ತು ಕಲೆಗೆ ಆಗಿರುವ ಪ್ರಯೋಜನ ಅದರಲ್ಲಿ ದಾಖಲಿಸಬೇಕೆಂದು ಹೇಳುತ್ತಾರೆ. ಇದಕ್ಕಾಗಿ ಸಾಹಿತ್ಯ ಚರಿತ್ರೆಕಾರರು ಕವಿಗಳ ಕಾಲ, ಅವರ ಜೀವನ ಗ್ರಂಥಗಳು ಮತ್ತು ಅದು ರಚಿತವಾದ ಸಂದರ್ಭ ಮುಂತಾದ ಪರಿಜ್ಞಾನ ಹೊಂದಿರಲೇಬೇಕು’ ಎಂದು ಹೇಳುತ್ತಾರೆ. ರಾಬರ್ಟ್ ಸ್ಟಿಲ್ಲರ್ ಎಂಬ ಸಾಹಿತ್ಯ ಚರಿತ್ರೆಕಾರ ‘ಸಾಹಿತ್ಯ ಜೀವನ ಚರಿತ್ರೆ ತಿಳಿಯುವುದು ಅತಿ ಅವಶ್ಯಕವಾದದ್ದು’ ಎನ್ನುತ್ತಾನೆ. ಅಲ್ಲದೆ ಅದು ಒಬ್ಬ ಲೇಖಕನ ಅಥವಾ ಒಂದು ಕಾಲದ ಜೀವನನಾನುಭವಸಾರ. ಈ ಅನುಭವ ಅವನ ಕ್ರಿಯಾಶೀಲತೆಯ ಮತ್ತು ಲಕ್ಷಣಗಳ ಧ್ಯೋತಕ, ಇದು ಸಾಹಿತ್ಯ ಚರಿತ್ರೆಯ ಸ್ವರೂಪವನ್ನು ನಿರ್ಧರಿಸುವಲ್ಲಿ ಸಹಾಯಕವಾಗುತ್ತದೆ. ಭಾಷೆಯ ಕಾಲ, ದೇಶ ಸಮಾಜಗಳಿಗೆ ಅನುಗುಣವಾಗಿ ಬದಲಾಗುವ ಹಾಗೆ ಸಾಹಿತ್ಯದ ಪ್ರಕಾರವೂ ಬದಲಾಗುತ್ತದೆ. ಈ ಬದಲಾವಣೆ ಹಿನ್ನೆಲೆಯಲ್ಲಿ ಒಂದು ಜನತೆಯ ಜೀವನದ ನಾನಾ ಘಟ್ಟಗಳನ್ನು ಗುರುತಿಸಬಹುದು.ಸಾಹಿತ್ಯ ಚರಿತ್ರೆಯನ್ನು ಓದುದರಿಂದ ಜನರಲ್ಲಿ ಸಾಹಿತ್ಯ ಅಭಿರುಚಿಗಳಿರುತ್ತದೆ. ಇದರ ಅಭ್ಯಾಸ ನಮ್ಮ ಸಂಸ್ಕೃತಿಯ ಅಭ್ಯಾಸ. ನಮ್ಮ ಸಾಂಸ್ಕೃತಿಕ ನೈತಿಕ ಗುಣ ವಿಶೇಷಗಳನ್ನು ಅರಿಯಬೇಕಾದರೆ ನಾವು ನಮ್ಮ ಸಾಹಿತ್ಯಕ್ಕೆ ಶರಣು ಹೋಗಲೇಬೇಕು. ಆದ್ದರಿಂದ ಆಯಾ ಭಾಷೆಯ ಸಾಹಿತ್ಯ ಚರಿತ್ರೆಯನ್ನು ಮುಂದಿನ ಪೀಳಿಗೆಯವರು ಅರಿಯುವುದು ಅನಿವಾರ್ಯ ಹಾಗೂ ಅವಶ್ಯಕ.

ಸಾಹಿತ್ಯ ಚರಿತ್ರೆ ಅಧ್ಯಯನ ಕ್ರಮಗಳು:

ಯಾವುದೇ ಭಾಷೆಯ ಸಾಹಿತ್ಯ ಚರಿತ್ರೆಯನ್ನು ಅಧ್ಯಯನ ಮಾಡಬೇಕಾದರೂ ಅದಕ್ಕೊಂದು ವಿಭಾಗಿಯ ಕ್ರಮವನ್ನು ಮಾಡಿಕೊಳ್ಳುವುದು ಅನಿವಾರ್ಯ. ಹಾಗೆ ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡ ಸಾಹಿತ್ಯಕ್ಕಂತೂ ಈ ವಿಭಾಗಿಯ ಕ್ರಮ ಅನಿವಾರ್ಯ ಮತ್ತು ಅಗತ್ಯವಾದದ್ದು. ಈ ವಿಭಾಗ ಕ್ರಮಕ್ಕೆ ಒಂದು ತಳಹದಿ ಹಾಗೂ ತತ್ವದ ಆಧಾರವಿದೆ.

ಮತಧರ್ಮಕ್ಕೆ ಅನುಗುಣವಾಗಿ:

ಕನ್ನಡ ಸಾಹಿತ್ಯ ಚರಿತ್ರೆಗೆ ವಿಫುಲವಾದಂತಹ ಸಾಮಗ್ರಿಯನ್ನು ಮೊಟ್ಟಮೊದಲು ಒದಗಿಸಿದವರು ಆರ್. ನರಸಿಂಹಾಚಾರ್ಯ ಅವರು ಅವರು “ಕವಿ ಚರಿತೆ” ಗ್ರಂಥದಲ್ಲಿ ಕನ್ನಡ ಕವಿಗಳನ್ನು ಸ್ಥೂಲವಾಗಿ ಜೈನ, ವೀರಶೈವ ಮತ್ತು ವೈಷ್ಣವ ಎಂದು ವಿಭಾಗಿಸಿದ್ದಾರೆ. ಈ ಕವಿಗಳು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಸಂಪದ್ಭರಿತವಾಗಿಸಿದ್ದಾರೆ. ಯುಗದಲ್ಲಿ ಮತ ಧರ್ಮ ಅನುಸರಿಸಿ ಕಾಲ ವಿಭಾಗ  ಮಾಡುವ ಕ್ರಮವನ್ನು ಕಾಣುತ್ತೇವೆ. ಈ ವಿಂಗಡನೆ ಬಹಳ ಕಾಲ ಉಳಿಯಿತು.

ಕಾಲ ವಿಭಾಗಕ್ಕೆ ಅನುಗುಣವಾಗಿ:

ಸಾಹಿತ್ಯೋದಯದ ಆರಂಭಿಕ ಕಾಲದಿಂದ ಅಂದರೆ ಸುಮಾರು ೧೦ನೇ ಶತಮಾನದವರೆಗೆ ಜೈನ ಯುಗದಲ್ಲಿ ಚಂಪೂ ಗ್ರಂಥಗಳು, ೧೧- ೧೨ನೇ ಶತಮಾನದ ಅವಧಿಯಲ್ಲಿ ವೀರಶೈವ ಯುಗದಲ್ಲಿ ವಚನ, ರಗಳೆ, ಷಟ್ಪದಿ ಗ್ರಂಥಗಳು, ಹಾಗೆ ೧೩-೧೪ನೇ ಶತಮಾನದ ಸಂದರ್ಭದ ವೈಷ್ಣವ ಯುಗದಲ್ಲಿ ಷಟ್ಪದಿ, ಕೀರ್ತನೆಗಳು ವಿಫುಲವಾಗಿ ಬೆಳೆದವು.

ಭಾಷಾ ದೃಷ್ಟಿಕೋನಕ್ಕೆ ಅನುಗುಣವಾಗಿ:

ಭಾಷಾ ದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಕನ್ನಡ ಸಾಹಿತ್ಯ ಚರಿತ್ರೆಯನ್ನು ಐದು ರೀತಿಯಾಗಿ ವಿಭಾಗಿಸಲಾಗಿದೆ ಇದು ಎಂ. ಎ ದೊರೆ ಸ್ವಾಮಿ ಅಯ್ಯಂಗಾರ್ ಅವರ ವಿಭಾಗಿಯ ಕ್ರಮ
೧. ಪೂರ್ವದ ಹಳೆಗನ್ನಡ ಕಾಲ ಕ್ರಿ.ಶ ೭೫೦ ರವರೆಗೆ
೨. ಹಳಗನ್ನಡ ಕಾಲ ಕ್ರಿಸ್ತಶಕ ೭೫೦ ರಿಂದ ಕ್ರಿ.ಶ. ೧೧೫೦ ರವರೆಗೆ
೪.ನಡುಗನ್ನಡ ಕಾಲ ಕ್ರಿಸ್ತಶಕ ೧೧೫೦ ರಿಂದ ಕ್ರಿ.ಶ ೧೫೦೦ ವರೆಗೆ
೫.ಹೊಸಗನ್ನಡ ಕಾಲ ೧೫೦೦ ರಿಂದ ೧೮೫೦ ಇತ್ತೀಚಿನವರೆಗೆ.

ವಿದ್ವಾಂಸರ ವಿಭಾಗೀಯ ಕ್ರಮ:

ತಿ.ತಾ. ಶರ್ಮಾ: ಇವರು ಶಾಸ್ತ್ರ ಯುಗ, ಮತ ಪ್ರಚಾರಕ ಯುಗ, ಸಾರ್ವಜನಿಕ ಯುಗ ಮತ್ತು ಆಧುನಿಕ ಯುಗ ಎಂದು ವಿಭಾಗಿಸಬೇಕೆಂದು ಹೇಳಿದರು. ಕ್ಷಾತ್ರ ಯುಗದಲ್ಲಿ ವೀರ, ಮತ ಪ್ರಚಾರ ಯುಗದಲ್ಲಿ ಶೃಂಗಾರ, ಸಾರ್ವಜನಿಕ ಯುಗದಲ್ಲಿ ಭಕ್ತಿ .ಈ ರಸಗಳಿಗೆ ಪ್ರಾಧಾನ್ಯತೆಯಿತ್ತೆಂದು ಇವರು ಅಭಿಪ್ರಾಯ ಪಡುತ್ತಾರೆ.
ಕೆ ವೆಂಕಟರಾಮಪ್ಪ: ಇವರು ತಮ್ಮ ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಆರಂಭಕಾಲ ಪಂಪ ಯುಗ, ಸ್ವಾತಂತ್ರ್ಯದ ಯುಗ, ಚಿಕ್ಕದೇವರಾಯನ ಕಾಲ, ಸಂಧಿಕಾಲ ಎಂದು ವಿಭಾಗಿಸಿದ್ದಾರೆ. ಇದರಲ್ಲಿ ಅನುಸರಿಸಲಾದ ಕ್ರಮವೆಂದರೆ ಆಯಾ ಕಾಲದಲ್ಲಿ ಪ್ರಧಾನರಾದ ಕವಿ ಅಥವಾ ಕಾವ್ಯಗಳ ವೈಶಿಷ್ಟ್ಯ.
ಬಿಎಂ ಶ್ರೀಕಂಠಯ್ಯ: ಇವರು ತಮ್ಮ ಕನ್ನಡ ಕೈಪಿಡಿಯಲ್ಲಿ ಮತ ಮತ್ತು ಕಾಲವನ್ನು ಅನುಸರಿಸಿ ಸಾಹಿತ್ಯ ಚರಿತ್ರೆಯನ್ನು ವಿಭಾಗ ಮಾಡಬಹುದು ಎಂದು  ಹೇಳಿದ್ದಾರೆ.
೧. ಆರಂಭಕಾಲ ಕ್ರಿ.ಶ ೧೦ನೇ ಶತಮಾನದವರೆಗೆ.
೨. ಮತ ಪ್ರಾಬಲ್ಯ ಕಾಲ ಕ್ರಿಸ್ತಶಕ ಹತ್ತರಿಂದ ಹದಿನಾರನೇ ಶತಮಾನದವರೆಗೆ( ಜೈನ ಕವಿಗಳು ಕ್ರಿಸ್ತಶಕ ೧೦ನೇ ಶತಮಾನದಿಂದ, ವೀರಶೈವ ಕವಿಗಳು ೧೨ನೇ ಶತಮಾನದಿಂದ, ಬ್ರಾಹ್ಮಣ ಕವಿಗಳು ೧೫ನೇ ಶತಮಾನದಿಂದ)
೩.ನವೀನ ಕಾಲ: ೧೬ನೇ ಶತಮಾನದಿಂದ.
ರಂ. ಶ್ರೀ ಮುಗಳಿ: ಇವರು ಆಯಾ ಯುಗದಲ್ಲಿ ಶ್ರೇಷ್ಠರಾದ ಕವಿಗಳ ಹೆಸರನ್ನು ಕೊಟ್ಟು ವಿಭಾಗ ಮಾಡಿದ್ದಾರೆ. ಅವರ ದೃಷ್ಟಿಯಲ್ಲಿ ಮತ ತತ್ವಕ್ಕಿಂತ ಕವಿ ಮುಖ್ಯ. ಪರಂಪರೆಯ ತಿರುಳನ್ನು ಅಳವಡಿಸಿಕೊಂಡ ಅವರು ಹೊಸ ದಾರಿಯನ್ನು ಕಂಡುಕೊಂಡು ಮುಂದಿನವರಿಗೆ ದಾರಿ ಮಾಡಿ ಕೊಟ್ಟಿರುತ್ತಾರೆ. ಪಂಪ ಬಸವ ಕುಮಾರವ್ಯಾಸರ ಹೆಸರುಗಳನ್ನು ಆಯಾ ಯುಗಕ್ಕೆ ಇಟ್ಟಿದ್ದಾರೆ.
ತ.ಸು. ಶಾಮರಾಯ: ಇವರು ಪಂಪ ಪೂರ್ವ ಯುಗ, ಪಂಪ ಯುಗ, ಹರಿಹರ ಯುಗ ಕುಮಾರವ್ಯಾಸ ಯುಗ ಎಂಬ ವಿಭಾಗ ಕ್ರಮವನ್ನು ಮಾಡಿದ್ದಾರೆ.

ಕನ್ನಡ ಸಾಹಿತ್ಯದ ಪ್ರಾಚೀನತೆ:

ಕನ್ನಡ ಸಾಹಿತ್ಯ ಚರಿತ್ರೆ ಯಾವಾಗ ಉದಯವಾಯಿತು ಎಂದು ನಿರ್ದಿಷ್ಟವಾಗಿ ಹೇಳಲಾಗದಿದ್ದರೂ ಇದುವರೆಗೆ ದೊರೆತ ಆಧಾರಗಳಿಂದ ಅದರ ಪ್ರಾಚೀನತೆಯನ್ನು ಅರಿಯುವ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಕನ್ನಡ ನಾಡು ನುಡಿ ಕ್ರಿಸ್ತಪೂರ್ವದಷ್ಟು ಪ್ರಾಚೀನವಾದದ್ದು. ಕ್ರಿಸ್ತಪೂರ್ವ ೩-೪ನೇ ಶತಮಾನಕ್ಕೆ ಸೇರಿದ ಸಂಸ್ಕೃತ ಮಹಾಭಾರತದಲ್ಲಿ ಕರ್ಣಾಟಕ ಎಂಬ ಮಾತು ಬರುತ್ತದೆ. ಈ ಶಬ್ದ ಕನ್ನಡ ಎಂಬುದರ ಸಂಸ್ಕೃತ ರೂಪವಾಗಿರುವುದರಿಂದ ಇದನ್ನು ನಾಡು ನುಡಿ ಎರಡಕ್ಕೂ ಅನ್ವಯಿಸಿ ಹೇಳಬಹುದು. ಕ್ರಿಸ್ತ ಪೂರ್ವ ಎರಡನೇ ಶತಮಾನದಲ್ಲಿ ಬಂದಿದ್ದ ಗ್ರೀಕ್ ಪ್ರವಾಸಿ ಟಾಲೆಮಿಯು ತನ್ನ ಬರಹದಲ್ಲಿ ಕನ್ನಡ ನಾಡಿನ ಪ್ರಸಿದ್ಧ ನಗರಗಳನ್ನು ಬಂದರುಗಳನ್ನು ಹೆಸರಿಸಿದ್ದಾನೆ. ಅಂದರೆ ಆ ಕಾಲದಿಂದ ನಮ್ಮ ನಾಡು ನುಡಿಗಳು ಅಸ್ತಿತ್ವದಲ್ಲಿ ಇದ್ದವು ಎಂದಾಯಿತು. ಕನ್ನಡ ಪ್ರಾಚೀನತೆಯನ್ನು ಕೆಲವು ಆಧಾರಗಳಿಂದ ನಿರೂಪಿಸಬಹುದು.

೧. ಅನ್ಯದೇಶಿಕ ಇಲ್ಲವೇ ಅನ್ಯ ಭಾಷೆಯ ಪ್ರಾಚೀನ ಅವಶೇಷಗಳು:

ಕನ್ನಡ ನಾಡು ಮತ್ತು ನುಡಿ ಕ್ರಿ.ಪೂ ಮೂರನೇ ಶತಮಾನದಲ್ಲೆ ಅಸ್ತಿತ್ವದಲ್ಲಿದೆ ಎನ್ನುವ ಕುರುಹನ್ನು ಗುರುತಿಸಲಾಗಿದೆ. ಈಜಿಪ್ಟಿನಲ್ಲಿ ದೊರೆತ ಗ್ರೀಕ್ ಪ್ರಹಸನ ಒಂದರಲ್ಲಿ ಕನ್ನಡ ಶಬ್ದಗಳಿವೆ ಎಂದು ಡಾ. ಗೋವಿಂದ ಪೈ ಅವರು ಹೇಳುತ್ತಾರೆ. ಆದ್ದರಿಂದ ಕನ್ನಡ ಭಾಷೆ ಮತ್ತು ಸಾಹಿತ್ಯ ಕ್ರಿಸ್ತಶಕ ಎರಡನೇ ಶತಮಾನದಲ್ಲಿ ಇತ್ತು ಎಂಬುದು ಅವರ ವಾದ. ಇನ್ನು ಹಾಲ ರಾಜನು ಸಂಕಲನ ಮಾಡಿದ ಗಾಥಾಸಪ್ತಸತಿ ಎನ್ನುವ ಪದ್ಯ ಕಾವ್ಯ ಇದರಕಾಲ ಕ್ರಿಸ್ತಶಕ ೧ಅಥವಾ೨ನೇ ಶತಮಾನ. ಇದರಲ್ಲಿ ಕನ್ನಡದ ಪೊಟ್ಟ, ತುಪ್ಪ, ಪುಲಿ ಎಂಬ ನಾಮಪಗಳು, ಪೆಟ್ಟು, ತೀರ್ ಎಂಬ ಕ್ರಿಯಾಪದಗಳು ಇದೆ. ಆದ್ದರಿಂದ ಕನ್ನಡ ಆ ಕಾಲದಲ್ಲಿ ವ್ಯಾವಹರಿಕ ಭಾಷೆ ಮಾತ್ರವಲ್ಲ ಕಾವ್ಯ ಸಾಹಿತ್ಯ ಭಾಷೆ ಕೂಡ ಆಗಿತ್ತು ಅನ್ನೋದು ಇವರ ಅಭಿಮತ.

೨. ಕರ್ನಾಟಕದಲ್ಲಿ ದೊರೆತ ಕನ್ನಡದಲ್ಲಿ ರಚಿತವಾದ ಶಾಸನಗಳು.

ಕ್ರಿ.ಪೂ ಮೂರನೇ ಶತಮಾನದ ಅಶೋಕನ ಕಾಲದಿಂದಲೂ ಶಿಲಾ ಲಿಪಿಗಳು ಮತ್ತು ತಾಮ್ರಪಟಗಳು ಸಿಕ್ಕಿವೆ, ಅಶೋಕನ ಶಾಸನಗಳಲ್ಲಿ ಒಂದಾದ ಬ್ರಹ್ಮಗಿರಿ ಶಾಸನದಲ್ಲಿ ಇಸಿಲ ಶಬ್ಧ ಕಂಡುಬರುತ್ತದೆ.ಇದು ತಮಿಳಿನ ಎಯಿಲ್  ಆಗಿದೆ ಎಂದು ಡಿಎಲ್ ನರಸಿಂಹಾಚಾರ್ ವಾದಿಸುತ್ತಾರೆ.
ಜಲಗಾರದಿಬ್ಬದ ಶಾಸನ :ಇಲ್ಲಿಯವರೆಗೆ ಹಲ್ಮಿಡಿ ಶಾಸನವನ್ನು ಉಪಲಬ್ದದ ಮೊದಲ ಶಾಸನವೆಂದು ಕೆಲವು ವಿದ್ವಾಂಸರು ಅಭಿಪ್ರಾಯಸಿದ್ದಾರೆ. ಆದರೆ ಇತ್ತೀಚೆಗೆ ದೊರೆತ ಜಲಗಾರ ದಿಬ್ಬದ ಶಾಸನ  ಅದಕ್ಕಿಂತ ಪ್ರಾಚೀನವಾಗುವುದು ಎಂಬುದು ಕೆಲವು ವಿದ್ವಾಂಸರ ಅಭಿಪ್ರಾಯ. ಇದರ ಕಾಲ ಕ್ರಿಶ ೨೫೦. ಈ ಶಾಸನವು ತುಮಕೂರು ಜಿಲ್ಲೆಯ ಗೂಳೂರು ಹೋಬಳಿ ಹೊನ್ನುಡಿಕೆ ಗ್ರಾಮದ ಪೂರ್ವಕ್ಕೆ ಒಂದುವರೆ ಮೈಲಿ ದೂರದ ಜಲಗಾರ ದಿಬ್ಬದಲ್ಲಿದೆ. ಇದು ಗಂಗವಂಶದ ಮಾಧವನಿಗೆ ಸಂಬಂಧಪಟ್ಟದ್ದು.
ಹಲ್ಮಿಡಿ ಶಾಸನ: ಹಲ್ಮಿಡಿ ಶಾಸನದ ಕಾಲವನ್ನು ಡಾ. ಎಮ್. ಹೆಚ್. ಕೃಷ್ಣಯ್ಯ ಅವರು ಕ್ರಿಸ್ತಶಕ ೪೫೦ ಎಂದು ಹೇಳಿದ್ದಾರೆ. ಇದು ದಾನ ಶಾಸನ. ಪಲ್ಲವರೊಡನೆ ಹೋರಾಡಿ ಗೆದ್ದಿದ್ದಕ್ಕಾಗಿ ವಿಜ ಅರಸನಿಗೆ ಮೃಗೇಶ ಮತ್ತು ನಾಗೇಂದ್ರ ಎಂಬುವವರು ಬಾಳ್ಗಳ್ಚು ಕೊಟ್ಟರು ಇದುವೇ ಶಾಸನದ ವಸ್ತು. ಇದರಲ್ಲಿ ೨೦ ಪದಗಳು ಮಾತ್ರ ಕನ್ನಡದಲ್ಲಿದೆ. ಇದು ಪೂರ್ವದ ಹಳಗನ್ನಡಕ್ಕೆ ಸೇರಿದ್ದು. ಎಂಬುದು ಆರ್ ನರಸಿಂಹಾಚಾರ್ಯರ ಮತ. ಇದು ಮೂರನೇ ಶತಮಾನಕ್ಕೆ ಸೇರಿದೆ ಎಂದು ಸಂಸ್ಕೃತಭೂಯಿಷ್ಟವಾದ ಛಂದೋಬದ್ಧ ಕನ್ನಡ ಸಾಹಿತ್ಯ ವಿರಬೇಕೆಂದು ಹೇಳುತ್ತಾರೆ. ಏಕೆಂದರೆ  ಸಮೃದ್ಧ ಸಾಹಿತ್ಯವಿಲ್ಲದೆ ಶಾಸನಗಳನ್ನು ರಚಿಸಲು ಸಾಧ್ಯವಿಲ್ಲ. ವ್ಯಾಕರಣಬದ್ಧವಾದ ಭಾಷೆ ಪ್ರಚಾರದಲ್ಲಿರದೆ ಶಾಸನಗಳಲ್ಲಿ ಅವುಗಳನ್ನು ಬಳಸಲು ಸಾಧ್ಯವಿಲ್ಲ ಆದ್ದರಿಂದ ಒಂದೆರಡು ಶತಮಾನಗಳ ಹಿಂದೆ ಕನ್ನಡ ಸಾಹಿತ್ಯ ವಿರಬಹುದು.
ಬಾದಾಮಿ ಶಾಸನ: ಕ್ರಿಸ್ತಶಕ ೭ನೇ ಶತಮಾನದಿಂದ ಶಾಸನ ಸಾಹಿತ್ಯದ ಆರಂಭವಾಯಿತು? ಏಳನೇ ಶತಮಾನದಲ್ಲಿ ರಚಿತವಾದ ಬಾದಾಮಿ ಶಾಸನದಲ್ಲಿ ಕಪ್ಪೆ ಅರಭಟ್ಟನ ಸ್ವಭಾವದ ಚಿತ್ರಣವಿದೆ.
ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನ್ ನೀತನ್ ಪೆರನಲ್ಲ.
ಇದು ತ್ರಿಪದಿ ಛಂದಸ್ಸಿನಲ್ಲಿ ರಚಿತವಾದ ಶಾಸನ ಆವೇಶದಿಂದ ಕೂಡಿದ ಒಬ್ಬ ಕನ್ನಡ ವೀರನ ಚಿತ್ರ ಇಲ್ಲಿದೆ.
ಶ್ರವಣಬೆಳಗೊಳದ ಶಾಸನ:  ಜೀವನದ ನಶ್ವರತೆಯನ್ನು ಮನಗಂಡು ಸರ್ವವನ್ನು ತ್ಯಜಿಸಿದ ಜೈನಮುನಿಯ ವೈರಾಗ್ಯ ತಪೋ ಮಹಿಮೆಗಳು ಶ್ರವಣಬೆಳಗೊಳ ಶಾಸನದಲ್ಲಿದೆ. “ಸುರಚಾಪಂಬೋಲೇ ವಿದ್ಯುಲತೆಗಳ ತೆರವೊಲ್ಮಂಜು  ಮೊಲ್ತೋರಿ ಬೇಗಂ ಪರಿರಿಗುಂ ಶ್ರೀ ಲೀಲಾಧನವಿಭವ ಮಹಾರಾಶಿಗಳ್ ನಿಲ್ಲವಾಸಂ” ಪದ್ಯವೂ ತನ್ನ ಉಪಮೆಗಳ ಸೊಗಸಿನಿಂದ ಸಹೃದಯರ  ಮನವನ್ನು ತಣಿಸಿದೆ. ಆದರೂ ಇದರ ಕಾವ್ಯ ಗುಣವು ಶ್ರೇಷ್ಠ ಮಟ್ಟದ್ದು. ಶಿಲಾ ಲೇಖವಾಗಲಿ, ತಾಮ್ರಶಾಸನವಾಗಲಿ, ಚಾರಿತ್ರಿಕ ಹಾಗೂ ರಾಜಕೀಯ ಮಹತ್ವದ ಬರಹಗಳಿದ್ದು, ಅದರಲ್ಲಿ ಸಾಹಿತ್ಯವು ಗೌಣ. ಕೆಲವು ಮುಂದಿನ ಶಾಸನಗಳು ತಮ್ಮ ಭಾಷಾ ವೈಖರಿಯಿಂದ ಕಾವ್ಯ ಗುಣಗಳಿಂದ ಆನಂದವನ್ನು ಉಂಟು ಮಾಡಿವೆ. ಕನ್ನಡ ಸಾಹಿತ್ಯದ ಮೊದಲ ಲಿಖಿತ ದಾಖಲೆಗಳು ಶಾಸನಗಳಾಗಿರುವುದರಿಂದ ಇದನ್ನು ಕನ್ನಡ ಸಾಹಿತ್ಯ ತಲಕಾವೇರಿ ಎಂದು ಡಾ. ಚಿದಾನಂದ ಮೂರ್ತಿ ಅವರು ಕರೆದಿದ್ದಾರೆ.

೩.ಕವಿರಾಜಮಾರ್ಗದ ಆಧಾರಗಳು:

ಕವಿರಾಜಮಾರ್ಗ ಬಹಳ ಪ್ರಾಚೀನವಾದ ಗ್ರಂಥ ಇದು ಕನ್ನಡ ಸಾಹಿತ್ಯದ ಪ್ರಾಚೀನತೆಯ ಬಗ್ಗೆ ಸರಿಯಾದ ಮಾಹಿತಿಯನ್ನು ಒದಗಿಸಿದೆ. ಇದು ದಂಡಿಯ ಕಾವ್ಯದರ್ಶದ ವಿಚಾರವನ್ನು ಒಳಗೊಂಡಿದೆ.ಅಂದಿನ ಕನ್ನಡ ನಾಡು ನುಡಿಗಳ ಸ್ವರೂಪ, ಸಾಹಿತ್ಯದ ಸ್ಥಿತಿ, ವಿಮರ್ಶಾತ್ಮಕ ವಿವರಗಳಿಂದ ಕೂಡಿದ ಕವಿರಾಜಮಾರ್ಗದಲ್ಲಿ ಕಂಡುಬರುವ ಕೆಲವು ವಿಶೇಷ ವಿಚಾರಗಳು ಹೀಗಿವೆ.
೧. ‘ಕನ್ನಡ ಕಬ್ಬಂಗಳೊಳ್’ ಅಗಣಿತ ಗುಣದಿಂದ ಕೂಡಿರುವಾಗ ಗದ್ಯಪದ್ಯ ಸಮಿಶ್ರ ಕಾವ್ಯವನ್ನು ಗದ್ಯಕಥಾ ಎಂಬ ಹೆಸರಿನಿಂದ  ವಿದ್ವಾಂಸರು ಕರೆಯುತ್ತಾರೆ. ಈ ಮಾತು ಗದ್ಯ ಭಾಗ ಹೆಚ್ಚಾದ ಗದ್ಯಕತೆ ಎಂಬ ಪ್ರಕಾರ ಇತ್ತು ಎಂಬುದನ್ನು ಸೂಚಿಸುತ್ತದೆ.
೨. ಚತ್ತಾಣ ಮತ್ತು ಬೆದಂಡೆ ಎಂಬುದು ಬಹುಶಹ ಕಾವ್ಯ ಪ್ರಕಾರ ಇರಬಹುದು. ಪುರಾತನ ಕವಿಗಳು ಒಡಂಬಡ ಮಾಡಿದರು ಎಂದು ಹೇಳಿದರು ಅರ್ಥಸ್ಪುಟವಾಗಿಲ್ಲ. ಪುರಾಣ ಕವಿಗಳ್, ಪೂರ್ವಾಚಾರ್ಯರ್ ಕವಿ ವೃಷಭರ ಪ್ರಯೋಗಂಗಳ್ , ಪೂರ್ವ ಕಾವ್ಯ ರಚನೆಗಳು ಮುಂತಾದ ಪ್ರಯೋಗಗಳು ಪ್ರಾಚೀನ ಕಾವ್ಯರೂಪಗಳ ನಿರ್ಮಿತಿಯನ್ನು ತಿಳಿಸುತ್ತದೆ.
೩. ಕನ್ನಡ ಭಾಷೆ ಮತ್ತು ಸಾಹಿತ್ಯ ಪರಂಪರೆಯಾಗಿ ಬೆಳೆಯುತ್ತಾ ಬಂದು ಒಂದು ನಿಲುಗಡೆಯನ್ನು ಮುಟ್ಟಿದ್ದವು ಎಂಬ ಅರ್ಥ ಬರುವ ಒಂದು ಪದ್ಯವಿದೆ. ಪಳಗನ್ನಡವನ್ನು ಪೊಲಗೆಡಿಸಿ ನುಡಿಯುವರು  ಎಂಬ ಮತ್ತೊಂದು ಮಾತಿದೆ. ‘ನೆಲೆಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ’ ಎಂಬ ಮಾತಿನಿಂದ ಅಂದಿನ ಕಾವ್ಯಕ್ಕೂ ಮಾದರಿಯಾಗಿತ್ತು ಎಂದು ಹೇಳಬಹುದು. ಕವಿರಾಜಮಾರ್ಗದ ಕಾಲಕ್ಕೆ ಹಿಂದೆ ಪಳಗನ್ನಡ ಎಂಬ ಸ್ವರೂಪ ಇತ್ತು ಎಂದು ತಿಳಿಯುತ್ತದೆ.
೪. ಈ ಕೃತಿಯ ಕರ್ತೃ ‘ನಾಡ ವರ್ಗಳ್ ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣತಮತಿಗಳ್’ ಎಂದು ಹೇಳಿದ್ದಾನೆ. ಕನ್ನಡಿಗರು   ಸಹೃದಯರು ಸಹಜ ಕವಿಗಳು ಆಗಿದ್ದರೆಂದು ತಿಳಿದು ಬರುತ್ತದೆ.
೫. ಕವಿರಾಜಮಾರ್ಗ ಕಾರ ಗದ್ಯ ಪದ್ಯ ಕವಿಗಳನ್ನು ಹೆಸರಿಸಿದ್ದಾನೆ. ವಿಮಲೋದಯ, ನಾಗಾರ್ಜುನ, ಜಯ ಬಂಧು, ದುರ್ವಿ ನೀತಾದಿಗಳ್ ಕನ್ನಡ ಪ್ರಸಿದ್ಧ ಗದ್ಯಕಾರರು, ಪರಮಶ್ರೀ ವಿಜಯ ,ಕವಿಶ್ವರ, ಪಂಡಿತ ಚಂದ್ರ,ಲೋಕ ಪಾಲಾದಿಗಳನ್ನು ಪದ್ಯ ಕಾರರೆಂದು ಎಂದು ಕರೆದಿದ್ದಾನೆ. ಅವರ ರಚನೆಯ ಹಿಂದಿನ ಕಾವ್ಯಕ್ಕೆ ಲಕ್ಷಣವಾಗಿತ್ತೆಂದು ಹೇಳಿದೆ ಇವರಲ್ಲಿ ಶ್ರೀ ವಿಜಯನ ಕವಿರಾಜಮಾರ್ಗದ ಕರ್ತೃ.
ಕವಿರಾಜ ಮಾರ್ಗದಲ್ಲಿ ಕೆಲವು ಗ್ರಂಥಗಳಿಂದ ಆರಿಸಿದ ಲಕ್ಷ್ಯ ಪದ್ಯಗಳು ಇವೆ. ರಾಮಾಯಣದ ಲಕ್ಷ್ಯಗಳನ್ನು ಗಮನಿಸಿದಾಗ, ಹಿಂದೆ ಕನ್ನಡದಲ್ಲಿ ರಾಮಾಯಣಗಳು ರಚಿಸಿರಬಹುದು ಎಂದು ಹೇಳಬಹುದು. ಕನ್ನಡ ಭಾರತವು ಇದ್ದಿರಬಹುದು. ಈ ಕೃತಿಯಿಂದ ಪೂರ್ವದ ಕನ್ನಡ ಸಾಹಿತ್ಯದ ಬಗ್ಗೆ ಹಲವಾರು ಸಂಗತಿಗಳು ದೊರಕುತ್ತವೆ.

೪.ಇತರ ಗ್ರಂಥಗಳಿಂದ ದೊರೆತ ಆಧಾರಗಳು:

೧. ಪಂಪನ ಪಂಪ ಭಾರತ:

ಪಂಪ ಭಾರತದಲ್ಲಿ “ಮುನ್ನಿನ ಕಬ್ಬಮಂನೆಲ್ಲಮನಿಕ್ಕಿ  ಮೆಟ್ಟಿದವು ಸಮಸ್ತ ಭಾರತಮಂ ಆದಿಪುರಾಣ ಮಹಾ ಪ್ರಬಂಧಮುಂ” ಎಂದಿದ್ದಾನೆ. ಪಂಪನ ಈ ಮಾತು ಪಂಪ ಪೂರ್ವ ಯುಗದ ಸಾಹಿತ್ಯದ ಕಲ್ಪನೆಯನ್ನು ಕೊಡುತ್ತದೆ.  ಮುಂ ಸಮಸ್ತ ಭಾರತಮಂ ಅಪೂರ್ವಮಾಗೆ ಸಲೆ ಪೇಳ್ದ ಕವೀಶ್ವರರಿಲ್ಲ ವರ್ಣಕಂ ಕತೆ ಯೊಳೊಂಬುಡುವಡೆಯ ಪೇಳ್ವೆಡೆ ಪಂಪನೆ ಪೇಳ್ವಂ ಎಂಬ ಹೊತ್ತಿಯಿಂದ ಪಂಪನಿಗಿಂತ ಮುಂಚೆ ಬರೆದಂತಹ ಭಾರತಗಳು ಇದ್ದವು ಎಂದು ಅರ್ಥವಾಗುತ್ತದೆ.

೨.ಭಟ್ಟಕಳಂಕನ ಚೂಡಾಮಣಿ:

ಭಟ್ಟ ಕಳಂಕನು ೬೬ ಸಾವಿರ ಗ್ರಂಥ ಸಂಖ್ಯೆಯುಳ್ಳ ಚೂಡಾ ಮಣಿ ಎಂಬ ತತ್ಯಾರ್ಥ ಮಹಾಶಾಸ್ತ್ರ ವ್ಯಾಖ್ಯಾನ ಗ್ರಂಥದ ಬಗ್ಗೆ ಹೇಳಿದ್ದಾನೆ. ಚೂಡಾಮಣಿ ವ್ಯಾಖ್ಯಾನವನ್ನು ತಂಬುಲರಾಚಾರ್ಯರು ಕನ್ನಡದಲ್ಲಿ ಮಾಡಿದರೆಂದು  ಹೇಳಿದೆ. ಆದರೆ ಈ ಗ್ರಂಥ ಸಿಕ್ಕಿಲ್ಲ ಕನ್ನಡ ಸಾಹಿತ್ಯದ ಬಗ್ಗೆ ವಿಶೇಷ ಬೆಳಕು ಚೆಲ್ಲುತ್ತದೆ.
ಸೈಗೊಟ್ಟ ಶಿವಮಾರ ಕ್ರಿಸ್ತಶಕ ೮೦೦ರಲ್ಲಿ ಗಜಾಷ್ಟಕವನ್ನು ಬರೆದಿರುವನೆಂದು ಶಾಸನಗಳಿಂದ ಬರುತ್ತದೆ. ಇದು ಒನಕೆವಾಡು ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಕವಿರಾಜಮಾರ್ಗಕ್ಕೆ ಸಮಕಾಲೀನವಾಗಿ ಕ್ರಿಸ್ತಶಕ ೮೮೮ರಲ್ಲಿ ಗುಣಗಾಂಕಿಯ ಎಂಬ ಛಂದೋಗ್ರಂಥ  ರಚಿತವಾಗಿರಬೇಕೆಂದು ತಮಿಳು ಛಂದೋಗ್ರಂಥದಿಂದ ತಿಳಿದು ಬರುತ್ತದೆ. ೧೧ನೇ ಶತಮಾನದ ಜಯಕೀರ್ತಿಯ ಛಂದೋನು ಶಾಸನದಲ್ಲಿ ೨೦ ಜನ ಛಂದಶಾಸ್ತ್ರಜ್ಞರನ್ನು ಹೆಸರಿಸುತ್ತಾನೆ. ಅವರಲ್ಲಿ ಕೆಲವರಾದರು ಗ್ರಂಥಗಳನ್ನು ರಚಿಸಿರಬಹುದು. ಇದರಲ್ಲಿ ಪ್ರಭುಸೇನಿಯ, ಅಸಗ ಮುಂತಾದ ಕವಿಗಳ ಹೆಸರು ಬಂದಿದೆ. ವಡ್ಡಾರಾಧನೆ ಕ್ರಿಸ್ತಶಕ ೬ನೇ ಶತಮಾನಕ್ಕೆ ಮುಂಚೆ ರಚಿತವಾಗಿರಬೇಕೆಂದು ಗೋವಿಂದ ಪೈ ಅವರು ಹೇಳುತ್ತಾರೆ. ಬೌದ್ಧರೆ ಕನ್ನಡದ ಆದಿ ಕವಿಗಳು ಕ್ರಿ.ಶ.ಆದಿಭಾಗದಿಂದಲೂ ಕನ್ನಡ ಭಾಷೆಯಲ್ಲಿ ಗ್ರಂಥ ರಚನೆಯಾಗುತ್ತಿರಬೇಕು. ಬೌದ್ಧಮತದ ನಾಶದೊಂದಿಗೆ ಗ್ರಂಥಗಳು ನಾಶವಾದವು ಎಂದು  ಟಿ .ಎಸ್. ವೆಂಕಣ್ಣಯ್ಯನವರು ಹೇಳುತ್ತಾರೆ. ಆದರೆ ಒಂದು ಗ್ರಂಥದ ವಿಷಯವು ದೊರೆಯದೆ ಇರುವುದರಿಂದ ಇದರ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಎಲ್ಲಾ ಆಧಾರ ಮತ್ತು ಪ್ರಮಾಣಗಳನ್ನು ಪರಿಶೀಲಿಸಿದಾಗ ಕನ್ನಡ ನುಡಿ ಕ್ರಿಸ್ತಪೂರ್ವ ೩೦೦ ವರ್ಷಗಳಿಗಿಂತ ಹಿಂದೆ ಇದ್ದಿರಬೇಕೆಂದು, ಸಾಹಿತ್ಯ ಕ್ರಿಸ್ತಶಕ ೧೫೦ ವರ್ಷಗಳಷ್ಟು ಹಿಂದೆ ಇದ್ದಿರಬಹುದು ಎಂದು ತಿಳಿಯಬಹುದು. 

ʼಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ Wikipedia ನೋಡಬಹುದು.ʼ

Leave a comment