
ಔರಾ (Aura ) ಅಥವಾ ಪ್ರಭಾವಳಿ ಎಂದರೆ ಎಲ್ಲಾ ಜೀವಿಗಳಲ್ಲಿ ಹೊರಹೊಮ್ಮುವ ಜೈವಿಕ ವಿದ್ಯುತ್ ಕಾಂತೀಯ ಶಕ್ತಿ ಕ್ಷೇತ್ರವಾಗಿದೆ. ಮಾನವನ ಪ್ರಭಾವಳಿ ತುಂಬಾ ಸಂಕೀರ್ಣವಾಗಿದೆ. ಬೆಳಕಿನ ರೂಪದ ಶಕ್ತಿಯ ಗೋಳವಾಗಿದೆ. ಇದು ದೇಹದ ಸುತ್ತಲು ಅಂಡಾಕಾರ ರೂಪದಲ್ಲಿರುತ್ತದೆ.ಇದೊಂದು ಶಕ್ತಿ ಕ್ಷೇತ್ರ. ನಮ್ಮ ಆಲೋಚನೆ ಭಾವನೆ ಅನುಭವಗಳ ಆಧಾರದ ಮೇಲೆ ಈ ಶಕ್ತಿ ಕ್ಷೇತ್ರವು ಗಾತ್ರದಲ್ಲಿ ಬಣ್ಣದಲ್ಲಿ ಬದಲಾವಣೆ ಕಾಣುತ್ತದೆ. ಅಂದರೆ ಈ ಪ್ರಭಾವಳಿಯು ವ್ಯಕ್ತಿಯ ದೈಹಿಕ ಭಾವನಾತ್ಮಕ ಮಾನಸಿಕ ಮತ್ತುಆಧ್ಯಾತ್ಮಿಕ ಸ್ಥಿತಿಯನ್ನು ಪ್ರತಿಫಲಿಸುತ್ತದೆ. ಪ್ರಭಾವಳಿಯಿಂದಲೆ ವ್ಯಕ್ತಿಯ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಬಹುದು. ಈ ಪ್ರಭಾವಳಿಯನ್ನು ಬಾಹ್ಯ ಕಾಂತಿ ಎನ್ನುವರು. ಇದು ಎಲ್ಲಾ ಜೀವಿಗಳಲ್ಲಿ ಗಿಡಮರಗಳಲ್ಲಿಯೂ ಹಾಗೆ ನಿರ್ಜೀವ ವಸ್ತುಗಳಲ್ಲಿ ಇರುತ್ತದೆ. ನಮ್ಮ ದೇಹದ ಸುತ್ತ ಕೋಶಗಳು ಇರುತ್ತದೆ. ಅದು ಪಂಚಕೋಶಗಳು. ಅವುಗಳೆಂದರೆ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ ಕೋಶಗಳು. ಈ ಅನ್ನಮಯ ಕೋಶವೆ ಸ್ಥೂಲ ಶರೀರ. ವಿಜ್ಞಾನ ಮಯ, ಮನೋಮಯ, ಪ್ರಾಣಮಯ ಕೋಶ ಈ ಮೂರು ಸೇರಿ ಸೂಕ್ಷ್ಮ ಶರೀರ ಎನ್ನುವರು. ಸೂಕ್ಷ್ಮ ಶರೀರ ಎಂದರೆ ನಮ್ಮ ಮನಸ್ಸು ದೇಹದ ಮೂಲಶಕ್ತಿಯ ಸಮೇತ ಇರತಕ್ಕದ್ದು. ನಮ್ಮ ದೇಹಕ್ಕೆ ಏನೇ ತೊಂದರೆ ಆವರಿಸಿಕೊಂಡರು ಮೊದಲು ಪರಿಣಾಮ ಬೀರುವುದು ಈ ಐದು ಕೋಶಗಳ ಮೇಲೆ ನಂತರ ಭೌತಿಕ ಶರೀರದ ಮೇಲೆ ಪ್ರಭಾವ ಬೀರುವುದು.
ಔರಾದ ಏಳು ಪದರಗಳು:

ಪ್ರಭಾವಳಿಯೂ ಏಳು ಪದರಗಳ ಶಕ್ತಿ ಕ್ಷೇತ್ರಗಳ ಸಂಗ್ರಹದಿಂದ ಮಾಡಲ್ಪಟ್ಟಿದೆ. ಏಳು ಪದರಗಳನ್ನು ಶಕ್ತಿಕಾಯಗಳು ಎಂದು ಕರೆಯುವರು. ಪ್ರತಿ ಪದರ ನಮ್ಮ ಮೂಲಾಧಾರದಿಂದ ಸಹಸ್ರಾರದವರೆಗೆ ಇರುವ ಏಳು ಚಕ್ರಗಳಿಗೆ ಸಂಪರ್ಕ ಹೊಂದಿದೆ. ಈ ಏಳು ಪದರಗಳು ಹೀಗಿವೆ.
೧.ಮೊದಲನೆಯ ಪದರ ಭೌತಿಕ ಶಕ್ತಿಕಾಯ: ಇದು ಪ್ರಭಾವಳಿಯ ಮೊದಲ ಪದರ. ಇದು ನಮ್ಮ ದೇಹಕ್ಕೆ ಹತ್ತಿರವಾಗಿರುತ್ತದೆ. ಇದು ನಮ್ಮ ದೈಹಿಕ ಆರೋಗ್ಯವನ್ನು ಪ್ರತಿನಿಧಿಸುತ್ತದೆ. ಮೂಲಾಧಾರ ಚಕ್ರಕ್ಕೆ ಸಂಬಂಧಿಸಿದ್ದು.
೨.ಎರಡನೆಯ ಪದರ ಭಾವನಾತ್ಮಕ ಶಕ್ತಿಕಾಯ: ಭಾವನೆಗಳಿಗೆ ಸಂಬಂಧಿಸಿದ್ದು.ಇದು ಸ್ವಾದಿಷ್ಟಾನ ಚಕ್ರಕ್ಕೆ ಸಂಪರ್ಕ ಹೊಂದಿದೆ. ಇದು ನಮ್ಮ ಮನಸ್ಥಿತಿಯನ್ನು ಆಧರಿಸಿ ಬಣ್ಣದಲ್ಲಿ ಬದಲಾವಣೆ ಹೊಂದುತ್ತದೆ. ನಾವು ಖುಷಿಯಾಗಿದ್ದಾಗ ಒಂದು ರೀತಿಯಲ್ಲಿ ಬಣ್ಣ ಹೊಳಪಿನಿಂದ ಕೂಡಿರುತ್ತದೆ. ಒತ್ತಡದಿಂದ ಇದ್ದರೆ ಮಬ್ಬುಬಣ್ಣದಲ್ಲಿ ಕಾಣಿಸುತ್ತದೆ.
೩.ಮೂರನೆಯ ಪದರ ಮಾನಸಿಕ ಶಕ್ತಿ ಕಾಯ: ಈ ಪ್ರಭಾ ಮಂಡಲವು ನಮ್ಮ ಮನಸ್ಥಿತಿ ಮತ್ತು ಅಹಂಕಾರವನ್ನು ಪ್ರತಿನಿಧಿಸುತ್ತದೆ. ನಮ್ಮ ಮಣಿಪುರ ಚಕ್ರಕ್ಕೆ ಸಂಬಂಧಿಸಿದ್ದು. ಮಾನಸಿಕವಾಗಿ ಸದೃಢವಾದಾಗ ಬಣ್ಣದ ಕಿಡಿಯನ್ನು ಉತ್ಪಾದಿಸುತ್ತದೆ.
೪.ನಾಲ್ಕನೆಯ ಪದರ ಸೂಕ್ಷ್ಮ ಶಕ್ತಿ ಕಾಯ: ಇದು ಆಧ್ಯಾತ್ಮಿಕ ಉನ್ನತಿಯನ್ನು ನೀಡುತ್ತದೆ. ಇದು ಅನಾಹುತ ಚಕ್ರಕ್ಕೆ ಸಂಬಂಧಪಟ್ಟದ್ದು. ಆಧ್ಯಾತ್ಮಿಕ ಕಾಯ ಆರೋಗ್ಯವಾಗಿದ್ದರೆ ಹೊಳೆಯುವಂತಹ ಗುಲಾಬಿಯ ಕೆಂಪು ಬಣ್ಣದಿಂದ ಇದು ಕೂಡಿರುತ್ತದೆ.
೫.ಐದನೆಯ ಪದರ ಆಧ್ಯಾತ್ಮ ಕಾಯ:ಅತಿಂದ್ರಿಯ ಸಾಮರ್ಥ್ಯಗಳ ನೆಲೆಯಾಗಿದೆ. ಇದು ಗಂಟಲಿನ ಚಕ್ರ ಅಥವಾ ವಿಶುದ್ದಿ ಚಕ್ರಕ್ಕೆ ಸಂಬಂಧಪಟ್ಟಿರುತ್ತದೆ.
೬.ಆರನೇ ಪದರ ಬ್ರಹ್ಮಾಂಡಕಾಯ: ಅಂತಃ ಪ್ರಜ್ಞೆ ಮತ್ತು ಕನಸುಗಳನ್ನು ಹಿಡಿದಿರಿಸಿಕೊಂಡಿರುತ್ತದೆ. ಇದು ಆಜ್ಞಾಚಕ್ರಕ್ಕೆ ಸಂಬಂಧಿಸಿದ್ದು. ಆರೋಗ್ಯವಾಗಿದ್ದಾಗ ಕಾಮನಬಿಲ್ಲಿನ ಪದರದಂತೆ ಇಲ್ಲಿನ ಬಣ್ಣ ಹೊಳೆಯುತ್ತಿರುತ್ತದೆ.
೭.ಏಳನೇ ಪದರ ನಿರ್ವಾಣ ಶಕ್ತಿ ಕಾಯ: ಪ್ರಭಾವಲಯದ ಕೊನೆಯ ಮತ್ತು ಅತ್ಯಂತ ವಿಸ್ತಾರವಾದ ಪದರ ಇದು. ಎಲ್ಲಾ ಪ್ರಭಾ ಮಂಡಲದ ಸಂಯೋಜನೆಯಾಗಿದೆ. ಇದು ಸಹಸ್ರಾರ ಚಕ್ರಕ್ಕೆ ಸಂಬಂಧಿಸಿದ್ದು. ಚಿನ್ನದ ಬಣ್ಣವನ್ನು ಹೊಂದಿದೆ.
ಔರಾದ ಶಕ್ತಿಯ ಗುರುತಿಸುವಿಕೆ:
೧.ನಮ್ಮ ಭೌತಿಕ ಅಥವಾ ಅನ್ನಮಯ ಕೋಶಕ್ಕೆ ರಕ್ಷಾಕವಚ: ನಮಗೆ ದೈಹಿಕವಾಗಿ ಬರುವ ಕಾಯಿಲೆಗಳ ಲಕ್ಷಣಗಳು ನಮ್ಮ ಪ್ರಭಾವಲಯಕ್ಕೆ ಮೊದಲು ಕಾಣಿಸುತ್ತದೆ. ನೇರವಾಗಿ ಕಾಯಿಲೆಗಳು ಪರಿಣಾಮ ಬೀರುವುದನ್ನು ತಪ್ಪಿಸುತ್ತದೆ. ನಾಳೆ ಏನೊ ಕೆಡುಕು ಸಂಭವಿಸಬಹುದು ಎಂಬುದನ್ನು ಇಂದೇ ಗುರುತಿಸುವ ಶಕ್ತಿಯನ್ನು ಇದು ಒದಗಿಸಿಕೊಡುತ್ತದೆ.
೨.ನಿರ್ದಿಷ್ಟವಾದ ತರಂಗಾಂತರದಲ್ಲಿ ಕೆಲಸ ಮಾಡುತ್ತದೆ: ಒಬ್ಬರ ಪ್ರಭಾವಳಿ ಇನ್ನೊಬ್ಬರ ಮೇಲೆ ಪ್ರಭಾವ ಬೀರುತ್ತದೆ. ಕೆಲವರು ನಮ್ಮ ಹತ್ತಿರಕ್ಕೆ ಸುಳಿದಾಗ ಅವರು ನಮಗೆ ಅಪರಿಚಿತರಾದರು ನಮಗೆ ಸಂತೋಷವಾಗುತ್ತದೆ. ಅವರೊಂದಿಗೆ ಸಮಯವನ್ನು ಕಳೆಯುವ ಅನಿಸುತ್ತದೆ ಕಾರಣ ಅವರೊಳಗಿರುವ ಆ ಸಕಾರಾತ್ಮಕ ಪ್ರಭಾವವಲಯ. ಇನ್ನು ನಕಾರಾತ್ಮಕ ಪ್ರಬಾವಲಯ ಹೊಂದಿರುವ ವ್ಯಕ್ತಿ ನಮ್ಮ ಹತ್ತಿರ ಸುಳಿದರೆ ನಮಗೆ ಸುಸ್ತು ,ಏನೊ ಕಸಿವಿಸಿ ಉಂಟಾದ ಅನುಭವವಾಗುತ್ತದೆ.ಹಾಗಾಗಿ ಪ್ರಭಾವಳಿಯು ಎದುರಿಗಿರುವ ವ್ಯಕ್ತಿಯನ್ನು ಪ್ರಭಾವಿಸುತ್ತಾ ಇರುತ್ತದೆ.
ಔರಾ ಶಕ್ತಿಯನ್ನು ನೋಡುವ ವಿಧಾನ:
೧ ಕನ್ನಡಿ ಮುಂದೆ ನಿಂತುಕೊಂಡು ನೋಡುವುದು: ಕನ್ನಡಿಯ ಮುಂದೆ ನಿಂತುಕೊಳ್ಳಬೇಕು. ನಿಮ್ಮ ಹಿಂದೆ ಬಿಳಿ ಗೋಡೆ ಇರಬೇಕು. ಕಣ್ಣನ್ನು ಮುಚ್ಚಿಕೊಳ್ಳಬೇಕು. ಆಳವಾದ ಉಸಿರು ತೆಗೆದುಕೊಳ್ಳಬೇಕು. ನಿಧಾನವಾಗಿ ಕಣ್ಣನ್ನು ತೆರೆಯಬೇಕು. ಕನ್ನಡಿಯಲ್ಲಿ ನಿಮ್ಮ ಹಣೆಯ ಮಧ್ಯ ಭಾಗವನ್ನು ನೋಡಬೇಕು. ಹಾಗೆ ನಿಮ್ಮ ಗಮನವನ್ನು ಅಲ್ಲಿ ಕೇಂದ್ರೀಕರಿಸಬೇಕು. ಒಂದು ಅಥವಾ ಎರಡು ನಿಮಿಷಗಳ ಕಾಲ ಕಣ್ಣು ಮುಚ್ಚದೆ ದೃಷ್ಟಿ ಹಾಯಿಸಬೇಕು. ಕಣ್ಣನ್ನು ಚಲಿಸಬಾರದು ಈಗ ನಿಮ್ಮ ತಲೆಯ ಸುತ್ತ ಬಣ್ಣ ಕಾಣಿಸುತ್ತದೆ ಅದೇ ನಿಮ್ಮ ಪ್ರಭಾವಳಿ.
೨.ಬಿಳಿಯ ಗೋಡೆ ಎದುರು ಕೂತು ನೋಡಬಹುದು: ಕಣ್ಣನ್ನು ಮುಚ್ಚಿ ಮನಸ್ಸನ್ನು ಕೇಂದ್ರೀಕರಿಸಿಕೊಳ್ಳಲು ಮೂರು ಬಾರಿ ದೀರ್ಘ ಉಸಿರನ್ನು ತೆಗೆದುಕೊಳ್ಳಿ. ಕೆಲವು ನಿಮಿಷಗಳ ನಂತರ ಕಣ್ಣನ್ನು ತೆರೆಯಿರಿ. ಒಂದು ಕೈಯನ್ನು ಎದೆ ಮಟ್ಟಕ್ಕೆ ಮುಂದಕ್ಕೆ ಚಾಚಿ, ನಿಮ್ಮ ದೃಷ್ಟಿಯನ್ನು ಅಂಗೈನ ಕೇಂದ್ರ ಭಾಗದಲ್ಲಿ ಇರಿಸಿ ಒಂದೆರಡು ನಿಮಿಷ ಹಾಗೆ ನೋಡಿ.ನಂತರ ಬಿಳಿಯ ಗೋಡೆಯ ಮೇಲೆ ನಿಮ್ಮ ದೃಷ್ಟಿ ಹರಿಸಿದರೆ ಅಲ್ಲಿಯೂ ಪ್ರಭಾವಳಿ ನಿಮಗೆ ಕಾಣಿಸುತ್ತದೆ.
೩.ಬಯಲಿನಲ್ಲಿ ಕಾಣಿಸುತ್ತದೆ: ಇಳಿ ಸಂಜೆ ಹೊತ್ತಿನಲ್ಲಿ ದೊಡ್ಡ ಬಯಲಿನಲ್ಲಿ ಸೂರ್ಯನಿಗೆ ಬೆನ್ನು ಹಾಕಿ ನಿಮ್ಮ ನೆರಳಿಗೆ ನೇರವಾಗಿ ಮುಖ ಮಾಡಿ ನಿಲ್ಲಬೇಕು. ಕಣ್ಣನ್ನು ಮುಚ್ಚಿ ಆಳವಾದ ಉಸಿರು ತೆಗೆದುಕೊಂಡು ಮನಸ್ಸನ್ನು ವಿಶ್ರಾಂತ ಗೊಳಿಸಿಕೊಳ್ಳಬೇಕು. ನಿಧಾನವಾಗಿ ನಿಮ್ಮ ನೆರಳಿನ ತಲೆಯ ಭಾಗವನ್ನು ನೋಡಬೇಕು. ಎರಡು ನಿಮಿಷದ ನಂತರ ಒಮ್ಮೆಲೇ ಆಕಾಶದತ್ತ ದೃಷ್ಟಿ ಹಾಯಿಸಿ ಒಂದೆರಡು ಸಲ ಕಣ್ಣು ಮಿಟುಕಿಸಿದರೆ ಬೆಳಕಿನ ಮನುಷ್ಯನ ಆಕೃತಿಯಲ್ಲಿ ಕಾಣಿಸುತ್ತದೆ. ಅದೇ ನಿಮ್ಮ ಪ್ರಭಾವಳಿ.
೪.ರೇಕಿ ವಿಧಾನ ಅರಿಯುದರ ಮೂಲಕ: ನೀವು ರೇಕಿ ಹೀಲರ್ ಆಗಿದ್ದರೆ ಪ್ರಭಾವಳಿಯನ್ನು ಸುಲಭವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ.
ಔರಾದ ಬಣ್ಣ ಹಾಗೂ ಅದರ ಅರ್ಥ:
ಪ್ರಭಾವಳಿಯ ಪ್ರತಿಯೊಂದು ಬಣ್ಣ ಆಧ್ಯಾತ್ಮಿಕ ಚಕ್ರಕ್ಕೆ ಸಂಬಂಧಿಸಿದೆ. ಆ ಬಣ್ಣಗಳು ಹೀಗಿವೆ:
ಕಪ್ಪು ಬಣ್ಣ ಅಥವಾ ಕಂದು ಬಣ್ಣ: ನಿಮ್ಮ ಪ್ರಭಾವಳಿ ಕಪ್ಪಾಗಿದ್ದರೆ ಅಥವಾ ಕಂದು ಬಣ್ಣದಲ್ಲಿ ಇದ್ದರೆ ನಕಾರಾತ್ಮಕತೆಯನ್ನು ಹಿಡಿದಿರಿಸಿಕೊಂಡಿದ್ದೀರಿ ಎಂದರ್ಥ. ಈ ಬಣ್ಣ ಇದ್ದಾಗ ಅದು ನಿಮ್ಮ ಚಕ್ರಗಳಿಗೆ ಶಕ್ತಿಯನ್ನು ಹರಿಸುವುದನ್ನು ನಿಲ್ಲಿಸುತ್ತದೆ. ಇದು ಸ್ವಾರ್ಥದ ಸಂಕೇತ.
ಬೂದು ಬಣ್ಣ: ಈ ಬಣ್ಣದ ಪ್ರಭಾವಳಿ ಇದ್ದರೆ ಅದು ನಿರಾಶವಾದಿ ಭಾವನೆಯ ಸಂಕೇತ. ಅದು ನಿಂತು ಹೋಗಿರುವ ಶಕ್ತಿಯ ಸಂಕೇತ.
ಕೆಂಪು ಬಣ್ಣ: ಇದು ಉತ್ಸಾಹ, ಕ್ರಿಯಾಶೀಲತೆ, ಶಿಸ್ತಿನ ಸಂಕೇತ ಯಾವುದೇ ವಿಷಯದಲ್ಲಿ ಸ್ಪಷ್ಟತೆ ಇದೆ ಎನ್ನುವುದನ್ನು ಇದು ಸೂಚಿಸುತ್ತದೆ. ನಿಮ್ಮೊಳಗೆ ಶಾಂತಿ ಮತ್ತು ಸುರಕ್ಷತೆಯ ಭಾವನೆಯನ್ನು ಅನುಭವಿಸುತ್ತಿದ್ದೀರಿ ಎಂದು ಈ ಬಣ್ಣ ತೋರಿಸುತ್ತದೆ.
ಕಿತ್ತಳೆ ಬಣ್ಣ: ಇದು ಸೃಜನಶೀಲತೆ ಚೈತನ್ಯ ದೊಂದಿಗೆ ಸಂಬಂಧ ಹೊಂದಿದೆ ನಿಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿದಿರಿ ಎನ್ನುವುದನ್ನು ಈ ಬಣ್ಣ ಸೂಚಿಸುತ್ತದೆ. ಉತ್ತಮ ಆರೋಗ್ಯವನ್ನು ಪ್ರತಿನಿಧಿಸುತ್ತದೆ.
ಹಳದಿ ಬಣ್ಣ: ಇದು ಲವಲವಿಕೆ, ಆಶಾವಾದ, ಆರೋಗ್ಯಕರವಾದ ಸ್ವಾರ್ಥವನ್ನು ಸೂಚಿಸುತ್ತದೆ. ನೀವು ಮುಕ್ತ ಮನಸ್ಸಿನವರಾಗಿರುತ್ತೀರಿ ಎನ್ನುವುದನ್ನು ಸೂಚಿಸುತ್ತದೆ. ತಿಳುವಳಿಕೆಯ ಕುತೂಹಲ ಹೊಂದಿರುವಿರಿ ಎನ್ನುವ ಸೂಚನೆಯನ್ನು ಈ ಬಣ್ಣ ನೀಡುತ್ತದೆ.
ಹಸಿರು ಬಣ್ಣ: ಈ ಬಣ್ಣದ ಪ್ರಭಾವಳಿ ಹೊಂದಿದ ವ್ಯಕ್ತಿ ಸಹಾನುಭೂತಿ ಹೊಂದಿದ್ದಾನೆ ಎನ್ನುವುದರ ಸೂಚನೆ. ಈ ಬಣ್ಣದ ಪ್ರಭಾವಳಿ ಹೊಂದಿರುವ ವ್ಯಕ್ತಿ ಇತರರ ಬಗ್ಗೆ ಕಾಳಜಿ ಹೊಂದಿದ್ದಾನೆ ಪ್ರಕೃತಿಯ ಜೊತೆಗೆ ಕಾಲ ಕಳೆಯಲು ಹೆಚ್ಚು ಆಸಕ್ತಿ ಹೊಂದಿದ್ದಾನೆ ಎನ್ನುವಂತಹ ಸೂಚನೆ ಇದೆ.
ನೀಲಿ ಬಣ್ಣ: ಈ ಬಣ್ಣದ ಪ್ರಭಾವಳಿ ಹೊಂದಿರುವ ವ್ಯಕ್ತಿ ಸ್ವಯಂ ಅಭಿವ್ಯಕ್ತಿ ,ಸಂವಹನ ಶೈಲಿ, ಜೀವನದಲ್ಲಿ ಸಮಗ್ರತೆ ಹೊಂದಿದ್ದಾನೆ ಎನ್ನುವಂತ ಅರ್ಥ ಇದೆ. ಹಾಗೆ ಬೇರೆಯವರ ಪ್ರಭಾವಳಿವನ್ನು ನೋಡುವ ಸಾಮರ್ಥ್ಯವನ್ನು ಹೊಂದಿದ್ದೀರಿ ಎಂದರ್ಥ.
ಕಡು ನೀಲಿ ಬಣ್ಣ: ಈ ಬಣ್ಣದ ಪ್ರಭಾವಳಿಯನ್ನು ಹೊಂದಿರುವ ವ್ಯಕ್ತಿಗಳು ಅತೀಂದ್ರಿಯ ಸಾಮರ್ಥ್ಯ ಹಾಗೂ ಆಳವಾದ ಆಧ್ಯಾತ್ಮಿಕ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅನೇಕ ಜನ್ಮಗಳ ಜ್ಞಾನ ಹೊಂದಿರುವವರಾಗಿರುತ್ತಾರೆ.
ನೇರಳೆ ಬಣ್ಣ: ಈ ಬಣ್ಣದ ಪ್ರಭಾವಳಿ ಹೊಂದಿರುವವರು ಆಧ್ಯಾತ್ಮಿಕವಾಗಿ ಉನ್ನತ ಮಟ್ಟದಲ್ಲಿ ಇರುತ್ತಾರೆ. ಆಧ್ಯಾತ್ಮಿಕ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಾರೆ, ಆಳವಾದ ವಿಷಯದ ಬಗ್ಗೆ ಆಸಕ್ತಿಯನ್ನು ಹೊಂದಿರುತ್ತಾರೆ. ಇತರರ ಜೀವನವನ್ನು ಸುಧಾರಿಸುವುದರ ಕಡೆಗೆ ಗಮನವನ್ನು ಇರಿಸುತ್ತಾರೆ.
ಬಿಳಿ ಬಣ್ಣ: ಇದು ಸಮತೋಲನ, ಶಾಂತತೆಯ ಸಂಕೇತ. ಈ ಬಣ್ಣದ ಪ್ರಭಾವಳಿ ಹೊಂದಿರುವ ಪ್ರತಿಯೊಬ್ಬರ ಪ್ರತಿಯೊಂದು ಚಕ್ರ ತೆರೆದು ಅಲ್ಲಿ ಶಕ್ತಿ ಚೆನ್ನಾಗಿ ಪ್ರವಹಿಸುತ್ತದೆ. ಉತ್ತಮ ಆರೋಗ್ಯದ ಸಂಕೇತವು ಕೂಡ ಇದಾಗಿದೆ.
ಚಿನ್ನದ ಬಣ್ಣ: ಈ ಪ್ರಭಾವಳಿ ಹೊಂದಿರುವ ವ್ಯಕ್ತಿಗಳು ಆದ್ಯಾತ್ಮಿಕವಾಗಿ ಮುಂದುವರಿಯುತ್ತಾರೆ. ತಮ್ಮ ಸುತ್ತ ಸಂತೋಷವನ್ನು ಹರಡಿರುತ್ತಾರೆ, ಆತ್ಮದ ಉದ್ದೇಶದ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ಇವರಿಗಿದೆ. ಇನ್ನೊಬ್ಬರಿಗೆ ಮಾರ್ಗದರ್ಶಕರಾಗಿರುತ್ತಾರೆ.
ಕಾಮನಬಿಲ್ಲಿನ ಬಣ್ಣ: ಈ ಬಣ್ಣದ ಪ್ರಭಾವಳಿ ಹೊಂದಿರುವವರು ಇವರೆ ಹೀಲರ್ ಗಳಾಗಿರುತ್ತಾರೆ. ಆಧ್ಯಾತ್ಮಿಕ ಬೆಳವಣಿಗೆ ಹೊಂದಿರುತ್ತಾರೆ. ಎಲ್ಲ ಚಕ್ರಗಳು ತೆರೆದು ವಿಶೇಷ ಶಕ್ತಿಯ ಅರಿವು ಇವರಲ್ಲಿ ಇರುತ್ತದೆ.
ಮೋಡದ ಬಣ್ಣ: ಈ ಬಣ್ಣದ ಪ್ರಭಾವಳಿಯನ್ನು ಹೊಂದಿರುವವರು ಆಧ್ಯಾತ್ಮಿಕವಾಗಿ ಮಾನಸಿಕವಾಗಿ ಭಾವನಾತ್ಮಕವಾಗಿ ಅಡಚಣೆ ಹೊಂದಿರುತ್ತಾರೆ. ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಿರುತ್ತಾರೆ. ಇಂತಹ ವ್ಯಕ್ತಿಗಳು ಸರಿಯಾಗಿ ಹೀಲ್ ಮಾಡಿಕೊಳ್ಳುವುದು ಉತ್ತಮ.
ಔರಾ ಶಕ್ತಿಯ ದುರ್ಬಲಗೊಳ್ಳುವುದಕ್ಕೆ ಕಾರಣಗಳು:
ಪ್ರಭಾವಳಿ ಹಲವು ಕಾರಣಕ್ಕೆ ದುರ್ಬಲಗೊಳ್ಳಬಹುದು. ಆ ಕಾರಣಗಳು ಹೀಗಿದೆ.
೧. ಹೆಣ್ಣು ಮಕ್ಕಳು ಚೆನ್ನಾಗಿ ಅಲಂಕಾರ ಮಾಡಿಕೊಂಡಾಗ ಅವರ ಅಂದ ಚೆಂದ ನೋಡಿದ ಜನರ ದೃಷ್ಟಿ ತಾಗಿದಾಗ ಅವರ ಪ್ರಭಾವಳಿ ದುರ್ಬಲಗೊಳ್ಳುತ್ತದೆ.
೨. ಮುದ್ದಾದ ಮಗುವನ್ನು ಜನ ದೃಷ್ಟಿಸಿ ನೋಡಿದಾಗ ಮಗುವಿನ ಪ್ರಭಾವಳಿಯ ಮೇಲೆ ಜನರ ದೃಷ್ಟಿ ಪರಿಣಾಮ ಬೀರಿ ಅದರ ಪ್ರಭಾವಳಿ ದುರ್ಬಲಗೊಳ್ಳಬಹುದು.
೩. ವೇದಿಕೆ ಮೇಲೆ ತಮ್ಮ ಕಲಾ ಪ್ರದರ್ಶನ ನೀಡಿದ ವ್ಯಕ್ತಿಗಳ ಮೇಲೆ ಜನರ ದೃಷ್ಟಿಬಿದ್ದಾಗ ಆ ವ್ಯಕ್ತಿಯ ಪ್ರಭಾವಳಿ, ದುರ್ಬಲಗೊಳ್ಳುತ್ತದೆ
೪. ಯಾರೇ ಆದರೂ ಚೆನ್ನಾಗಿ ಬದುಕುತ್ತಿರುವುದನ್ನು ನೋಡಿ ಜನ ಹೊಟ್ಟೆ ಕಿಚ್ಚಿನಿಂದ ಮಾತನಾಡಲು ಶುರುವಾದಾಗ ಅವರ ಪ್ರಭಾವಳಿ ದುರ್ಬಲಗೊಳ್ಳುತ್ತದೆ.
೫. ನೀವು ನಕಾರಾತ್ಮಕ ಜನರ ಜೊತೆ ಸಂಪರ್ಕ ಹೊಂದಿದಾಗ ನಿಮ್ಮ ಪ್ರಭಾವಳಿ ದುರ್ಬಲಗೊಳ್ಳುತ್ತದೆ
೬. ನೀವು ಭಯಪಡಿಸುವಂತಹ, ಗಲೀಜು ತುಂಬಿರುವಂತಹ ,ಕತ್ತಲು ತುಂಬಿರುವ, ಹಾಗೆ ವಾಸನೆ ಬರುವ ಸ್ಥಳಗಳಲ್ಲಿ ಇದ್ದಾಗ ನಿಮ್ಮ ಪ್ರಭಾವಳಿ ದುರ್ಬಲಗೊಳ್ಳುತ್ತದೆ.
೭. ನೀವು ಸಾವಿನ ಮನೆಗೆ ಭೇಟಿ ಕೊಟ್ಟಾಗ ಸಹಜವಾಗಿ ನಿಮ್ಮ ಪ್ರಭಾವಳಿ ದುರ್ಬಲಗೊಳ್ಳುತ್ತದೆ.
೮. ನೀವು ಆಸ್ಪತ್ರೆಗಳಿಗೆ ಭೇಟಿ ಕೊಟ್ಟಾಗಲು ನಿಮ್ಮ ಪ್ರಭಾವಳಿ ದುರ್ಬಲಗೊಳ್ಳುತ್ತದೆ.
ಈ ಮೇಲಿನ ಎಲ್ಲಾ ಕಾರಣಗಳಿಂದಲೂ ನಿಮ್ಮಭಾವನೆಗಳಲ್ಲಿ ಆಗುವ ಏರು ಪೇರುಗಳು ನಿಮ್ಮ ಪ್ರಭಾವಳಿಯನ್ನು ದುರ್ಬಲಗೊಳಿಸುತ್ತದೆ.
ಔರಾ ಶಕ್ತಿಯನ್ನು ಪ್ರಬಲಗೊಳಿಸುವ ವಿಧಾನ ಹೀಗಿದೆ:
ಈಗಾಗಲೇ ಪ್ರಭಾವಳಿ ದುರ್ಬಲಗೊಳ್ಳಲು ಕಾರಣಗಳೇನು ಎನ್ನುವುದರ ಬಗ್ಗೆ ತಿಳಿಸಲಾಗಿದೆ. ಪ್ರಭಾವಳಿ ದುರ್ಬಲಗೊಂಡ ಸಂದರ್ಭದಲ್ಲಿ ನಾವು ಬೇಸರ ಸುಸ್ತು ಹತಾಶೆ ಹೀಗೆ ಹಲವು ನಕಾರಾತ್ಮಕ ವಿಚಾರಗಳಿಗೆ ಒಳಗಾಗುತ್ತೇವೆ. ಈ ಸಂದರ್ಭದಲ್ಲಿ ನಕಾರಾತ್ಮಕ ವಿಚಾರಗಳನ್ನು ತೊಡೆದು ಹಾಕಿ ನಮ್ಮಲ್ಲಿ ಸಕಾರಾತ್ಮಕ ಸಂಗತಿಗಳನ್ನು ಹುಟ್ಟಿಸಿಕೊಳ್ಳಲು ಮನಸ್ಸನ್ನು ತಿಳಿಯಾಗಿಸಿಕೊಳ್ಳಲು ನೀರು ಬೆಂಕಿ ಗಾಳಿ ಶಬ್ದಗಳಿಂದಲೂ ಈ ನಕಾರಾತ್ಮಕ ವಿಷಯಗಳನ್ನು ತೆಗೆದು ಹಾಕಬಹುದು. ಆ ವಿಧಾನ ಹೀಗಿದೆ:
೧. ಹೊರಗಿನಿಂದ ಮನೆಗೆ ಬಂದಾಗ ಸ್ನಾನ ಮಾಡುವುದು. ಸ್ನಾನ ಮಾಡುವುದಕ್ಕೂ ಕೆಲವು ವಿಧಿ ವಿಧಾನಗಳಿವೆ. ಸ್ನಾನದ ನೀರಿಗೆ ಅರಿಶಿನವನ್ನು ಸ್ವಲ್ಪಉಪ್ಪನ್ನು ಬೆರೆಸಿ ಸ್ನಾನ ಮಾಡಬಹುದು. ಇನ್ನು ಒಳ್ಳೆಯ ವಿಧಾನ ಅಂತ ಹೇಳಿದರೆ ನದಿಯಲ್ಲಿ ಸ್ನಾನ ಮಾಡುವುದು ಅಥವಾ ಹರಿಯುವ ನೀರಿನಲ್ಲಿ ಸ್ನಾನ ಮಾಡುವುದು ಇನ್ನೂ ಉತ್ತಮ.
೨. ಹೊರಗಿನಿಂದ ಯಾವುದೇ ಸಭೆ ಸಮಾರಂಭಗಳನ್ನು ಅಥವಾ ಕಾರ್ಯಕ್ರಮಗಳನ್ನು ಮುಗಿಸಿ ಬಂದ ಯಾವುದೇ ವ್ಯಕ್ತಿಯಾಗಲಿ ಇದು ಚಿಕ್ಕ ಮಕ್ಕಳಾಗಲಿ ಅಥವಾ ದೊಡ್ಡವರಾಗಲಿ ಮೊದಲು ದೃಷ್ಟಿ ತೆಗೆಸಿಕೊಳ್ಳುವುದು ಉತ್ತಮ. ಹಾಗೆ ನೀರನ್ನು ನಿವಾರಿಸಿಕೊಳ್ಳುವುದು ಉತ್ತಮ .( ಓಕಳಿ ತೆಗೆಸಿಕೊಳ್ಳುವುದು)
೩. ಉದ್ಯಾನವನದಲ್ಲಿ ಅಥವಾ ಪ್ರಕೃತಿಯೊಂದಿಗೆ ಸ್ವಲ್ಪ ಕಾಲ ಕಳೆದು ಶುದ್ಧವಾದ ಗಾಳಿಯನ್ನು ಸೇವಿಸುವುದು ಇನ್ನೂ ಉತ್ತಮ.
೪ ಮನೆ ಅಥವಾ ದೇವಾಲಯದಲ್ಲಿ ದೇವರಿಗೆ ಆರತಿಯನ್ನು ಬೆಳಗಿ ಆ ಬೆಂಕಿಯ ಬಿಸಿಯನ್ನು ನಾವು ಕೈಗಳಿಂದ ತೆಗೆದುಕೊಂಡು ನಮ್ಮ ಕಣ್ಣು ಹಾಗೂ ತಲೆಗೆ ಇಟ್ಟುಕೊಳ್ಳುವುದು ಬಹಳ ಉತ್ತಮ.ಇದರಿಂದ ಮನಸ್ಸು ನೆಮ್ಮದಿಯನ್ನು ಅನುಭವಿಸುತ್ತದೆ.
೪. ಕೆಲವು ದೇವಾಲಯಗಳಲ್ಲಿ ಕೆಂಡ ತುಳಿಯುವ ಸಂಪ್ರದಾಯವಿದೆ. ಕೆಂಡ ತುಳಿಯುವುದರಿಂದಲೂ ಕೂಡ ನಮ್ಮ ಪ್ರಭಾವಳಿಯನ್ನು ಪ್ರಬಲಗೊಳಿಸಿಕೊಳ್ಳಬಹುದು.
೫. ಮನಸ್ಸಿನಲ್ಲಿ ಶಾಂತತೆಯನ್ನು ಸೃಷ್ಟಿಸಿಕೊಂಡು ದೇವಾಲಯವನ್ನು ಪ್ರವೇಶಿಸಿ ಅಲ್ಲಿ ಗಂಟೆ ಬಾರಿಸಿ ಗಂಟೆಯ ಶಬ್ದವನ್ನು ಕೇಳುವುದರಿಂದಲೂ ಕೂಡ ನಿಮ್ಮ ಪ್ರಭಾವಳಿಯನ್ನು ಪ್ರಬಲಗೊಳಿಸಿಕೊಳ್ಳಬಹುದು.
೫. ನಿಮಗೆ ಇಷ್ಟವಾದ ಮನಸ್ಸಿಗೆ ಮುದವನ್ನು ಕೊಡುವ ಸಂಗೀತವನ್ನು ಆಲಿಸುವುದರಿಂದಲೂ ಕೂಡ ಪ್ರಭಾವಳಿಯನ್ನು ಪ್ರಬಲಗೊಳಿಸಿಕೊಡಬಹುದು.
೬. ಪ್ರತಿನಿತ್ಯ ಯೋಗ ,ಧ್ಯಾನವನ್ನು ಮಾಡುವುದರಿಂದ ಪ್ರಭಾವಳಿ ಪ್ರಬಲಗೊಳ್ಳುತ್ತದೆ.
೭. ರೇಕಿಯ ಅಭ್ಯಾಸದಿಂದ ಪ್ರಭಾವಳಿ ಪ್ರಬಲಗೊಳ್ಳುತ್ತದೆ.
೮. ದಿನನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ಪ್ರಾಣಾಯಾಮ ಮಾಡುವುದರಿಂದಲೂ ಪ್ರಭಾವಳಿ ಪ್ರಬಲಗೊಳ್ಳುತ್ತದೆ
೯. ಮಂತ್ರ ಪಠಣ ಮಾಡುವುದರಿಂದ ಜಪ ತಪವನ್ನು ಮಾಡುವುದರಿಂದ ಪ್ರಭಾವಳಿ ಪ್ರಬಲಗೊಳ್ಳುತ್ತದೆ.
ಹೀಗೆ ಈ ಮೇಲೆ ಉಲ್ಲೇಖಿಸಿದಂತೆ ದಿನನಿತ್ಯ ನಾವು ಇಂತಹ ಒಳ್ಳೊಳ್ಳೆಯ ವಿಚಾರಗಳನ್ನು ರೂಡಿಸಿಕೊಂಡು ಹೋದರೆ ಖಂಡಿತವಾಗಿಯೂ ಕೂಡ ನಮ್ಮ ಪ್ರಭಾವಳಿ ಎನ್ನುವಂತದ್ದು ಪ್ರಬಲಗೊಳ್ಳುತ್ತದೆ. ಹಾಗೆ ಅದು ದುರ್ಬಲಗೊಳ್ಳುವಂತಹ ಅವಕಾಶಗಳು ಕೂಡ ಕಡಿಮೆಯಾಗುತ್ತದೆ. ಯಾವುದಾದರೂ ದುರ್ಬಲಗೊಳ್ಳುವಂತಹ ಸಂದರ್ಭ ಎದುರಾದರೂ ಕೂಡ ಇಂತಹ ಒಳ್ಳೆಯ ವಿಚಾರವನ್ನು ಮೈಗೂಡಿಸಿಕೊಂಡು ಹೋಗುವುದರಿಂದ ನಮ್ಮ ಪ್ರಭಾವಳಿಯನ್ನು ನಾವು ಖಂಡಿತವಾಗಿಯೂ ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ ಇಂತಹ ಒಂದು ವಿಧಿ ವಿಧಾನಗಳನ್ನು ದಿನನಿತ್ಯ ಅನುಸರಿಸುವುದರಿಂದ ನಮ್ಮ ಪ್ರಭಾವಳಿಯನ್ನು ಪ್ರಬಲ ಪ್ರಭಾವಳಿಯನ್ನಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.
.