ಯೋಗದ ಮಹತ್ವ|ಆರೋಗ್ಯಯುತ ಜೀವನಕ್ಕೆ ಯೋಗದ ಅವಶ್ಯಕತೆ.

ಯೋಗಾಭ್ಯಾಸದ ಚಿತ್ರ.

ಯೋಗದ ಮಹತ್ವ:

ಯೋಗದ ಮಹತ್ವವನ್ನು ಅರಿಯುವ ಮೊದಲು ಯೋಗ ಎಂದರೆ ಜೀವಾತ್ಮನನ್ನು ಪರಮಾತ್ಮನ ಜೊತೆಗೆ ಸೇರಿಸುವ ಪ್ರಕ್ರಿಯೆ . ಯೋಗ ಮನುಷ್ಯನ ದೇಹ ಮತ್ತು ಮನಸ್ಸಿಗೆ ನೆಮ್ಮದಿ ಮತ್ತು ವಿಶ್ರಾಂತಿ ಕೊಡುತ್ತದೆ. ಯೋಗ ಭಾರತೀಯ ಮೂಲದ ಅತ್ಯಂತ ಹಳೆಯದಾದ ಭೌತಿಕ ಮಾನಸಿಕ ಅಧ್ಯಾತ್ಮಿಕ ಅಭ್ಯಾಸವಾಗಿದೆ. ಸದೃಢ ದೇಹ ಮನಸ್ಸನ್ನು ಹೊಂದಿದಾಗ ಮಾತ್ರ ಮನುಷ್ಯ ಉತ್ತಮವಾದ ಜೀವನ ನಡೆಸಲು ಸಾಧ್ಯ. ಅದಕ್ಕಾಗಿ ದಿನನಿತ್ಯ ಯೋಗ ಮಾಡಲೇಬೇಕು.

“ಮನುಜಕುಲವೊಂದೊಬ್ಬನಿನ್ನೊಬ್ಬನಂತಿಲ್ಲ
ತನುವಂಗಗಳೊಂದೊಂದು ರೂಪ ಗುಣ ಬೇರೆ ಮನದೊಳೊಬ್ಬೊಬ್ಬನೊಂದೊಂದು ಪ್ರಪಂಚವಿಂ ತನುವೇಕದೊಳ್ ಬಹುಳ” _ಮಂಕುತಿಮ್ಮ
ಭೂಮಿಯ ಮೇಲೆ ಬದುಕುವ ಸಕಲ ಚರಾಚರ ಜೀವ ರಾಶಿಗಳ ಬದುಕಿಗಿಂತ ಮನುಷ್ಯನ ಬದುಕು ಭಿನ್ನವಾದದ್ದು. ಆ ಭಿನ್ನತೆಯನ್ನು ಭೌತಿಕವಾಗಿ ಗುರುತಿಸುವುದಾದರೆ ಬೇರೆ ಜೀವಿಗಳಿಗಿಂತ ಬುದ್ದಿವಂತನಾದ ಮನುಷ್ಯ ತನ್ನ ಬದುಕಿಗಾಗಿ ಕೆಲವೊಮ್ಮೆ ಸ್ವಾರ್ಥ ಪರನಾಗಿ,  ಕೆಲವೊಮ್ಮೆ ನಿಸ್ವಾರ್ಥನಾಗಿ ಹಲವು ಅವಕಾಶಗಳನ್ನು ಬಾಚಿಕೊಳ್ಳುತ್ತಾನೆ ,ಸೃಷ್ಟಿಸಿಕೊಳ್ಳುತ್ತಾನೆ. ತಾಳ್ಮೆ, ಸೇಡು,  ಸ್ವಾರ್ಥ, ಕಾಮ ,ಕ್ರೋಧ ಇತ್ಯಾದಿ ಇವೆಲ್ಲವೂ ಮನುಷ್ಯನ ಸಹಜ ಗುಣಗಳು. ಬಹುಶಹ ಸಂದರ್ಭಕ್ಕೆ ತಕ್ಕ ಹಾಗೆ ಇವೆಲ್ಲವೂ ಒಬ್ಬ ವ್ಯಕ್ತಿಯಿಂದ ಸಹಜವಾಗಿ ಹೊರಹೊಮ್ಮಿದ ವ್ಯಕ್ತಿತ್ವಗಳು. ಇಂತಹ ವ್ಯಕ್ತಿತ್ವ ಗಳಲ್ಲಿ ಉತ್ತಮವಾದದನ್ನು ಸಾಧ್ಯವಾದಷ್ಟು ಮಟ್ಟಿಗೆ ಅಳವಡಿಸಿಕೊಳ್ಳಲು ಕೆಲವು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಅಂತಹ ಉತ್ತಮ ಹವ್ಯಾಸಗಳಲ್ಲಿ ಯೋಗಾಭ್ಯಾಸವೂ ಒಂದು.

ಯೋಗದ ಉದ್ದೇಶ:

೧.ನೈತಿಕ ಮೌಲ್ಯವನ್ನು ಹೆಚ್ಚಿಸಿಕೊಳ್ಳಲು: ದಿನನಿತ್ಯದ ಯೋಗಾಭ್ಯಾಸವು ನಮ್ಮಲಿ ನೈತಿಕ ಮೌಲ್ಯವನ್ನು ಹುಟ್ಟಿಸುತ್ತದೆ. ನೈತಿಕ ಮೌಲ್ಯ ಎಂದರೆ ,ಯಾವುದು ಕೆಟ್ಟದ್ದು ಯಾವುದು ಒಳ್ಳೆಯದು ಎಂದು ನಿರ್ಧರಿಸಲು ಸಹಾಯ ಮಾಡುವ ಆದರ್ಶಗಳ ಗುಂಪು. ಇದು ಪ್ರಾಮಾಣಿಕತೆ, ದಯೆ ,ಗೌರವ ,ಸಹಾನುಭೂತಿ, ಜವಾಬ್ದಾರಿ ಅಂತಹ ಗುಣಗಳನ್ನು ಒಳಗೊಂಡಿರುತ್ತದೆ. ಯೋಗಾಭ್ಯಾಸದಿಂದಾಗಿ ಸಹಜವಾಗಿ ನಮ್ಮಲ್ಲಿ ಇಂತಹ ಗುಣಗಳು ರೂಢಿಗತವಾಗುತ್ತದೆ. ಇದರಿಂದಾಗಿ ಸಮಾಜದಲ್ಲಿ ನಾವು ಜವಾಬ್ದಾರಿಯುತ ನಾಗರಿಕನಾಗಿ ಬದುಕಲು ಸಹಾಯವಾಗುತ್ತದೆ.
೨. ಆಧ್ಯಾತ್ಮಿಕ ಶಕ್ತಿಯನ್ನು ಸಿದ್ಧಿಸಿಕೊಳ್ಳಲು: ನಾವು ಆಧ್ಯಾತ್ಮಿಕ ಶಕ್ತಿಯನ್ನು ಸಿದ್ಧಿಸಿಕೊಂಡು ಮಾನಸಿಕವಾಗಿ ಸದೃಢರಾಗಲು ದಿನನಿತ್ಯ ಯೋಗವನ್ನು ಮಾಡಬೇಕು. ಈ ಆಧ್ಯಾತ್ಮಿಕ ಸಿದ್ದಿಯು  ದೇಹ, ಮನಸ್ಸು ಮತ್ತು ಆತ್ಮದ ನಡುವಿನ ಸಾಮರಸ್ಯದ ಅರಿವನ್ನು ಕೇಂದ್ರೀಕರಿಸುತ್ತದೆ. ಸಹಜವಾಗಿ ಯೋಗಾಭ್ಯಾಸವನ್ನು ಮಾಡುವ ಸಂದರ್ಭದಲ್ಲಿ ನಾವು ಧ್ಯಾನಸ್ಥರಾಗುತ್ತೇವೆ. ಈ ಆಧ್ಯಾತ್ಮಿಕ ವಿಚಾರವನ್ನು ಸಾಧಿಸಬೇಕಾದರೆ ನಾವು ಧ್ಯಾನಸ್ಥರಾಗಬೇಕು. ಆಗ ನಾವು ಆಧ್ಯಾತ್ಮದ ಶಕ್ತಿಯನ್ನು ಪಡೆಯಬಹುದು. ಆಧ್ಯಾತ್ಮಿಕ ಶಕ್ತಿಯ ಸಿದ್ದಿಯಿಂದ ನಮ್ಮ ಮನಸ್ಸು ಸದೃಢವಾಗುತ್ತದೆ.
೪. ಸಹಜವಾಗಿ ನಮ್ಮಲ್ಲಿ ಶಿಸ್ತಿನಾ ಅಳವಡಿಕೆ ಆಗಲು: ಬದುಕಿನಲ್ಲಿ ಏನಾದರೂ ಸಾಧಿಸುವ ಛಲ ಅಥವಾ ಅಭಿಲಾಷೆಯನ್ನು ಪ್ರತಿಯೊಬ್ಬ ವ್ಯಕ್ತಿಯೂ ಹೊಂದಿರುತ್ತಾನೆ. ಅದನ್ನು ಸಾಧಿಸಬೇಕಾದರೆ ಸಹಜವಾಗಿ ಪ್ರತಿಯೊಬ್ಬನಲ್ಲಿ ಶಿಸ್ತಿನ ಅಳವಡಿಕೆ ಮುಖ್ಯವಾಗುತ್ತದೆ. ನಾವೇ ಸ್ವಯಂ ಅಂದರೆ ಆಂತರಿಕ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಆಂತರಿಕ ಶಿಸ್ತನ್ನು ಅಳವಡಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ನಿರಂತರ ಯೋಗಾಭ್ಯಾಸ ಮಾಡುವುದರಿಂದ ಆಂತರಿಕ ಶಿಸ್ತು ತಂತಾನೆ ನಿಮ್ಮಲ್ಲಿ ಹುಟ್ಟಿ ಬೆಳೆಯುತ್ತದೆ.
೫.ಸಮಯಪ್ರಜ್ಞೆಯ ಅರಿವನ್ನು ಮೂಡಿಸಲು: ಈ ಬದುಕು ನಮ್ಮ ಲೆಕ್ಕಾಚಾರದಂತೆ ಒಂದು ದಿನ ನಡೆದರೆ, ಇನ್ನೊಂದು ದಿನ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಬಹುದು. ಆದ್ದರಿಂದ ಸಮಯಪ್ರಜ್ಞೆ ಮುಖ್ಯವಾಗುತ್ತದೆ. ಹಾಗಾಗಿ ಸಮಯ ಪ್ರಜ್ಞೆಯ ಅರಿವು ನಿಮ್ಮಲ್ಲಿ ಮೂಡಬೇಕಾದರೆ ಪ್ರತಿನಿತ್ಯ ಯೋಗವನ್ನು ಮಾಡಬೇಕು. ದಿನನಿತ್ಯದ ನಿಮ್ಮ ಈ ಅಭ್ಯಾಸವು ತಂತಾನೆ ನಿಮ್ಮಲ್ಲಿ ಸಮಯ ಪ್ರಜ್ಞೆಯ ಅರಿವನ್ನ ಮೂಡಿಸುತ್ತದೆ.
೬.ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು: ದಿನನಿತ್ಯ ಯೋಗಾಭ್ಯಾಸವನ್ನು ಮಾಡುವ ಪ್ರತಿಯೊಬ್ಬ ವ್ಯಕ್ತಿಯು ಧ್ಯಾನಸ್ಥನಾಗುತ್ತಾನೆ. ಈ ಧ್ಯಾನಸ್ಥ ಸ್ಥಿತಿ ನಿಮ್ಮ ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಈ ಏಕಾಗ್ರತೆ ದಿನದ ಸ್ವಲ್ಪ ಸಮಯವನ್ನಾದರೂ ನಿಮ್ಮ ಆಲೋಚನೆಯನ್ನು ಸ್ಥಿರವಾಗಿರಿಸಿಕೊಳ್ಳುವ ಹಾಗೆ ಸಹಕರಿಸುತ್ತದೆ. ಇದರಿಂದ ನಿಮ್ಮ ಮನಸ್ಸು ಹಗುರವಾಗುತ್ತದೆ.
೭. ಒತ್ತಡ ನಿರ್ವಹಣೆ: ಇಂದಿನ ಜಗತ್ತನ್ನು ಗಮನಿಸಿದರೆ ಪ್ರತಿಯೊಬ್ಬರ ಪ್ರತಿ ಕ್ಷಣದ ಬದುಕು ಒತ್ತಡದಿಂದಲೇ ಸಾಗುತ್ತದೆ.ಈ ಒತ್ತಡಗಳಿಂದಾಗಿಯೇ ದೇಹ ಮತ್ತು ಮನಸ್ಸು  ಭಾರ ಎನಿಸುತ್ತದೆ. ಹಾಗಾಗಿ ದೇಹ ಮನಸ್ಸಿನ ಈ ಭಾರವನ್ನು ಇಳಿಸಲು ಯೋಗ ಅಭ್ಯಾಸವನ್ನು ದಿನನಿತ್ಯವೂ ಮಾಡಲೇಬೇಕು. ಅದು ನಿಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ.

೮. ನಮ್ಮೊಳಗಿನ ಪ್ರಜ್ಞೆಯ ಅರಿವನ್ನು ಮೂಡಿಸಲು: ದಿನದ ಒಂದಷ್ಟು ಸಮಯ ಯೋಗಾಭ್ಯಾಸದ ಮೂಲಕ ನಮ್ಮ ಮನಸ್ಸನ್ನು ಕೇಂದ್ರೀಕರಿಸಿಕೊಳ್ಳಲು ಸಾಧ್ಯವಾಗುತ್ತದೆ. ಮನಸ್ಸು ಕೇಂದ್ರೀಕರಣಗೊಂಡ ಸಂದರ್ಭದಲ್ಲಿ ಸಹಜವಾಗಿ ನಾವು ನಮ್ಮೊಳಗೆ ಹೊಸದಾಗಿ ಕಟ್ಟಿಕೊಳ್ಳುವ ಪ್ರಜ್ಞೆಯನ್ನು ಅರಿಯಲು ಸಾಧ್ಯವಾಗುತ್ತದೆ. ಇದರಿಂದಾಗಿ ನಮ್ಮನ್ನು ನಾವು ಅರಿಯಲು ಸುಲಭವಾಗುತ್ತದೆ.
೯ ಆಲೋಚನ ಶಕ್ತಿ ಹಿಡಿತದಲ್ಲಿರಿಸಲು: ದಿನನಿತ್ಯವೂ ನಮ್ಮೊಳಗೆ ಅನೇಕ ತರದ ಆಲೋಚನೆಗಳು ಹುಟ್ಟುತ್ತಲೇ ಇರುತ್ತದೆ. ಕೆಲವೊಮ್ಮೆ ಅತಿಯಾದ ಆಲೋಚನೆ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅನಗತ್ಯ ಆಲೋಚನೆಗಳಿಂದ ಮುಕ್ತಿ ಹೊಂದಲು ನಾವು ದಿನನಿತ್ಯ ಯೋಗಾಭ್ಯಾಸವನ್ನು ಮಾಡಲೇಬೇಕು. 

ಯೋಗದ ಪ್ರಯೋಜನಗಳು:

೧.ಯೋಗಾಭ್ಯಾಸದಿಂದ ತಾಳ್ಮೆ ಹೆಚ್ಚುತ್ತದೆ: ತನ್ನದೇ ಆದ ಸುಂದರ ಬದುಕಿನ ನಿರ್ಮಾಣದ ಕನಸು ಹೊತ್ತ ಪ್ರತಿಯೊಬ್ಬ ವ್ಯಕ್ತಿಯೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಮುಖ್ಯ ಗುಣ ಎಂದರೆ ತಾಳ್ಮೆ. ʼತಾಳುವಿಕೆಗಿಂತ ತಪವೂ ಇಲ್ಲʼ ಎಂಬ ದಾಸರ ಸೊಲ್ಲಿನಂತೆ ತಾಳ್ಮೆ ಮನುಷ್ಯನ ನಾಲಿಗೆಯನ್ನು ಅಂಗಾಂಗಗಳನ್ನು ನಿಯಂತ್ರಿಸುವ ಶಕ್ತಿಯುತವಾದ ಅಸ್ತ್ರ. ಯೋಗಾಭ್ಯಾಸದಿಂದ ಈ ತಾಳ್ಮೆ ಮನುಷ್ಯನಲ್ಲಿ ಸಹಜವಾಗಿ ಹುಟ್ಟುತ್ತದೆ.
೨.ಯೋಗಾಭ್ಯಾಸದಿಂದ ಮಾನಸಿಕ ಸ್ವಾಸ್ಥ್ಯ ಹೆಚ್ಚುತ್ತದೆ: ಪಾರಂಪರಿಕ ಜೀವನಶೈಲಿಯತ್ತ ಒಮ್ಮೆ ದೃಷ್ಟಿ ಹರಿಸಿದರೆ ಪರಂಪರೆಯ ಮನುಷ್ಯನಿಗೆ ಪ್ರಾಕೃತಿಕ ಸೃಷ್ಟಿಗಳಾದ ಮಳೆ ಚಳಿ ಬಿಸಿಲು ಜೊತೆಗೆ ಬದುಕಿನ ಜಂಜಾಟಗಳೆಲ್ಲವನ್ನು ಸಹಿಸುವ ಶಕ್ತಿ ಇತ್ತು. ಕಾರಣ ಆತ ಪ್ರಕೃತಿಯೊಂದಿಗೆ ಇಟ್ಟುಕೊಂಡ ನಂಟು, ಜೊತೆಗೆ ಅಳವಡಿಸಿಕೊಂಡ ಉತ್ತಮ ಜೀವನ ಶೈಲಿ, ಕಠಿಣ ಪರಿಶ್ರಮದೊಂದಿಗಿನ ಬದುಕು ,ಜೊತೆಗೆ ರೂಡಿಸಿಕೊಂಡ ಹವ್ಯಾಸಗಳು ಇವೆಲ್ಲವೂ ಅವನಲ್ಲಿ ಆತ್ಮವಿಶ್ವಾಸವನ್ನು ತಂತಾನೆ ಹುಟ್ಟಿಸುತ್ತಿತ್ತು. ಆದರೆ ಇಂದಿನ ಜಂಜಾಟದ ಬದುಕು, ಪ್ರಾಕೃತಿಕ ಸೃಷ್ಟಿಗಳು ಅದರೊಂದಿಗೆ ತಾನೇ ಸೃಷ್ಟಿಸಿಕೊಂಡ ಸಮಸ್ಯೆ ಇವುಗಳ ಸುಳಿಯಲ್ಲಿ ಬದುಕುತ್ತಿರುವ ಮನುಷ್ಯನು ಪುನಃ ನೇತ್ಯಾತ್ಮಕ ಬದುಕಿನ ಶೈಲಿಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ. ಇಂತಹ ಜೀವನ ಶೈಲಿಯ ಒಳಗೆ ಅಡಗಿರುವ ಪ್ರಮುಖ ಶಕ್ತಿಯೇ ಯೋಗ. ಯೋಗಾಭ್ಯಾಸವು ಮನುಷ್ಯನ ಮನಸ್ಸನ್ನು ಕೇಂದ್ರೀಕರಿಸಿ ಅವನ ಪ್ರತಿಯೊಂದು ಚಟುವಟಿಕೆಯನ್ನು ನಿಯಂತ್ರಣದಲ್ಲಿರುವ ಪರಿಣಾಮಕಾರಿಯಾದ ಹವ್ಯಾಸ.
೩.ಯೋಗಾಭ್ಯಾಸವು ದೇಹ ಮನಸ್ಸುಗಳನ್ನು ಹಗುರವಾಗಿಸುತ್ತದೆ: ಬೆಳಗಿನ ಜಾವದ ಪ್ರಶಾಂತವಾದ ವಾತಾವರಣದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದರೆ ದೇಹ ಮನಸ್ಸುಗಳ ಎರಡರಲ್ಲಿಯೂ ತುಂಬಿರುವ ಕಲ್ಮಶ ತೊರೆದು ದೇಹ ಮನಸ್ಸುಗಳೆರಡು ಹಗುರವಾಗುತ್ತದೆ.
೪.ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯವನ್ನು ಸಮತೋಲನದಲ್ಲಿ ಇರಿಸಿಕೊಳ್ಳಬಹುದು: ಇಂದಿನ ಜೀವನಶೈಲಿ, ಆಹಾರ ಅಭ್ಯಾಸಗಳು ಹೊರಗಿನ ವಾತಾವರಣದ ಅಸ್ತವ್ಯಸ್ತತೆ, ಮನಸ್ಸಿನ ಮೇಲೆ ಬೀರುವ ಕೆಲವು ಒತ್ತಡಗಳು ಬಿಡುವಿಲ್ಲದ ಕೆಲಸ ಕಾರ್ಯಗಳು ಇತ್ಯಾದಿ ಎಲ್ಲವೂ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಇವುಗಳಿಂದ ಸಾಧ್ಯವಾದಷ್ಟು ಮುಕ್ತಿ ಪಡೆಯಬೇಕಾದರೆ ಯೋಗಾಭ್ಯಾಸವನ್ನು ಮಾಡಬೇಕು. ಇದು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿರಿಸುತ್ತದೆ.
೫.ಯೋಗಾಭ್ಯಾಸದಿಂದ ಹಲವು ಮಾರಕ ಕಾಯಿಲೆಗಳಿಂದ ದೂರವಿರಬಹುದು: ಹೌದು ಇಂದಿನ ಜಗತ್ತಿನಲ್ಲಿ ಈ ಹಲವು ಮಾರಕ ಕಾಯಿಲೆಗಳ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೆ ಇದರಿಂದ ಹೆಚ್ಚಿನ ಜನರು ಬಳಲುತ್ತಿದ್ದಾರೆ. ದಿನನಿತ್ಯ ಯೋಗಾಭ್ಯಾಸವನ್ನು ರೂಡಿಸಿಕೊಳ್ಳುವುದರಿಂದ ಆದಷ್ಟು ನಾವು ಹಲವು ಮಾರಕ ಕಾಯಿಲೆಗಳಿಂದ ದೂರ ಇರಲು ಸಾಧ್ಯವಾಗುತ್ತದೆ.

೬.ಯೋಗಭ್ಯಾಸದಿಂದ ದೇಹದ ತೂಕ ಸಮತೋಲನದಲ್ಲಿರುತ್ತದೆ: ಯೋಗಾಭ್ಯಾಸದಿಂದ ನಿಮ್ಮ ದೈಹಿಕ ರಚನೆ ಉತ್ತಮವಾಗಿರುತ್ತದೆ. ಅಲ್ಲದೆ ದೇಹದ ತೂಕ ಅತಿ ಹೆಚ್ಚಾಗದೆ ಅಥವಾ ಅತಿ ಕಡಿಮೆಯಾಗದೆ ಸಮತೋಲನದಲ್ಲಿರುತ್ತದೆ.
೭.ಯೋಗಭ್ಯಾಸದಿಂದ ಸಂತೋಷ ಲಭಿಸುತ್ತದೆ: ದಿನನಿತ್ಯ ಯೋಗ ಮಾಡುವುದರಿಂದ ನಮ್ಮ ದೇಹ ಮತ್ತು ಮನಸ್ಸುಗಳನ್ನು ಕಾಡುವ ಎಲ್ಲ ರೀತಿಯ ಬಾಧೆಗಳಿಂದ ಮುಕ್ತಿ ಹೊಂದಿ ,ದೇಹ ಮನಸುಗಳೆರಡು ಹಗುರವಾಗಿ ಸದಾ ಲವಲವಿಕೆಯಿಂದ ಬದುಕಲು ಸಾಧ್ಯವಾಗುತ್ತದೆ.

ಹಾಗಾಗಿ ಈ ಮೇಲಿನ ಎಲ್ಲ ಸಂಗತಿಗಳನ್ನು ಅರಿತು, ವಿಜ್ಞಾನ ತಂತ್ರಜ್ಞಾನ ಅತ್ಯಂತ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಈ ಕಾಲಘಟ್ಟದಲ್ಲಿ ನಾವು ನಮ್ಮದೇ ಆದ ಸುಂದರವಾದ ಬದುಕನ್ನು ರೂಪಿಸಿಕೊಂಡು ಹೋಗಬೇಕೆನ್ನುವ ಆಸೆ ಆಕಾಂಕ್ಷೆಗಳನ್ನು ಹೊತ್ತ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬದುಕಿನಲ್ಲಿ ಎದುರಿಸಬೇಕಾದ ಹಲವು ಜಂಜಾಟಗಳ ನಡುವೆಯೂ ನಿರಾಳವಾಗಿ ಬದುಕಬೇಕಾದರೆ ದಿನನಿತ್ಯ ಯೋಗಾಭ್ಯಾಸವನ್ನು ರೂಡಿಸಿಕೊಳ್ಳಲೇಬೇಕು. ಬಹಳ ಹಿಂದಿನ ಅಂದರೆ ಹಳೆ ಕಾಲದ ಮನುಷ್ಯನ ಬದುಕಿಗೂ ಇಂದಿನ ಅಂದರೆ ಆಧುನಿಕ ಕಾಲದ ಮನುಷ್ಯನ ಬದುಕಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಸಾಂಪ್ರದಾಯಿಕ ಜೀವನ ಶೈಲಿಯನ್ನು ಸಂಪೂರ್ಣವಾಗಿ ಮರೆತು ಹಿಂದಿನ ಮನುಷ್ಯ ಆಧುನಿಕತೆಗೆ ಒಗ್ಗಿಕೊಂಡು ನವ ಬದುಕನ್ನು ಕಟ್ಟಿಕೊಳ್ಳುವ ಉತ್ಸಾಹದ ಭರದಲ್ಲಿ ತನ್ನ ಆರೋಗ್ಯದತ್ತ ಗಮನ ಕೊಡುವುದಕ್ಕೂ ಬಿಡುವಿಲ್ಲದೆ ಹೆಣಗಾಡುತ್ತಿದ್ದಾನೆ. ಹಾಗಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢವಾಗಿದ್ದರೆ ಮಾತ್ರ ಸ್ವಸ್ಥ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.ನೀವು ಪ್ರತಿನಿತ್ಯ ನಿಮಗಾಗಿ ,ನಿಮ್ಮ ಸುಸ್ಥಿರ ಆರೋಗ್ಯಕ್ಕಾಗಿ ಸ್ವಲ್ಪ ಸಮಯ ಮೀಸಲಿಡಿ. ಹಾಗಾಗಿ ದಿನನಿತ್ಯ ಯೋಗ ಅಭ್ಯಾಸದಿಂದ ನಿಮ್ಮ ದೈಹಿಕ ಹಾಗೂ ಮಾನಸಿಕ  ಸದೃಢತೆಯನ್ನು  ಸಾಧಿಸಲು ಸಾಧ್ಯವಾಗುತ್ತದೆ. ಇದನರಿತು ಎಲ್ಲರೂ ಸಮೃದ್ಧ ಜೀವನವನ್ನು ನಡೆಸೋಣ. 

Leave a comment