
ಮಾಘಮಾಸದ ಮಹತ್ವ:
ಮಾಘ ಮಾಸ 2026 ನಮ್ಮ ಧಾರ್ಮಿಕ ಹಿನ್ನೆಲೆಯ ಪ್ರಕಾರ ಮಾಸದಲ್ಲಿ ಅತ್ಯಂತ ಶ್ರೇಷ್ಠ ಮಾಸ ಮಾಘಮಾಸ. ನಮ್ಮ ಚಾಂದ್ರಮಾನ ಪಂಚಾಂಗದ ಪ್ರಕಾರ 11ನೇ ಮಾಸ ಮಾಘಮಾಸ. ಪುಷ್ಯ ಮಾಸದ ನಂತರ ಮತ್ತು ಪಾಲ್ಗುಣ ಮಾಸದ ಮೊದಲು ಬರುವಂತಹ ಮಾಸ.ಇದು ಆಧ್ಯಾತ್ಮಿಕವಾಗಿ ಹಾಗೂ ಧಾರ್ಮಿಕವಾಗಿ ಅತ್ಯಂತ ಪವಿತ್ರವಾದದ್ದು. ಹುಣ್ಣಿಮೆಯ ದಿನ ಮಕ ನಕ್ಷತ್ರವಿರುವುದರಿಂದ ಈ ಮಾಸಕ್ಕೆ ಮಾಘ ಮಾಸ ಎಂದು ಹೆಸರು. ಇದು ಉತ್ತರಾಯಣ ಪುಣ್ಯಕಾಲದ ಆರಂಭದ ಹಂತದಲ್ಲಿ ಬರುತ್ತದೆ.ಈ ಮಾಘ ಮಾಸ ಈ ವರ್ಷ ಅಂದರೆ 2026ರಲ್ಲಿ ಜನವರಿ 19 ರಿಂದ ಆರಂಭವಾಗಿ ಫೆಬ್ರವರಿ 17ರವರೆಗೆ ಇರುತ್ತದೆ.ಇದನ್ನು ಗುಪ್ತ ನವರಾತ್ರಿಯ ದಿನ ಎನ್ನುವರು. ನಾವು ಬದುಕಿನಲ್ಲಿ ಉದ್ಧಾರ ಆಗಬೇಕು, ಏಳಿಗೆ ಸಾಧಿಸಬೇಕು ಎನ್ನುವ ಆಶಾ ಭಾವನೆಯನ್ನು ಹೊತ್ತ ಪ್ರತಿಯೊಬ್ಬರು ಈ ಮಾಸದಲ್ಲಿ ಆಚರಿಸಲೇಬೇಕಾದ ಅತ್ಯಂತ ಸರಳ ಆಚರಣೆ ಎಂದರೆ, ಪ್ರತಿದಿನ ಬೇಗ ಏಳುವುದು, ಸ್ನಾನ ಮಾಡುವುದು,ಸೂರ್ಯನಿಗೆ ಅರ್ಘ್ಯ ಕೊಡುವುದು, ಗಂಗೆ ವಿಷ್ಣು ಗಣಪತಿ ಸೂರ್ಯನಾರಾಯಣ ದೇವರ ಪೂಜೆಯನ್ನು ಮಾಡುವುದು. ಜೊತೆಗೆ ಪಿತೃಗಳ ಪೂಜೆ ಮಾಡುವುದು ತುಂಬ ಮಹತ್ವದ್ದು. ಪ್ರತಿದಿನ ವಿಷ್ಣು ಸಹಸ್ರನಾಮ ಓದಬೇಕು.ವಿಷ್ಣು ಸಹಸ್ರನಾಮ ಓದುದರಿಂದ ನಮ್ಮ ಏಕಾಗ್ರತೆ ಹೆಚ್ಚುದರೊಂದಿಗೆ ಮನಶ್ಯಾಂತಿಯೂ ಲಭಿಸುತ್ತದೆ. ಮಾಘ ಮಾಸದಲ್ಲಿ ಅನುಸರಿಸಲೇಬೇಕಾದ ಕೆಲವು ನಿಯಮಗಳು ಹೀಗಿವೆ.
ಮಾಘ ಮಾಸದ ವಿಶೇಷ ಆಚರಣೆಗಳು:
೧. ಕ್ರಮಬದ್ಧವಾದ ಸ್ನಾನಕ್ಕೆ ಮಾಘ ಮಾಸದಲ್ಲಿ ವಿಶೇಷವಾದ ಪ್ರಾಧ್ಯಾನತೆ ಇದೆ:

ಈ ಮಾಸದಲ್ಲಿ ಬೆಳಗಿನ ಜಾವ ನಾಲ್ಕರಿಂದ ಐದು ನಲವತ್ತೈದರ ಒಳಗೆ ಎದ್ದು ಸ್ನಾನ ಮಾಡುವುದು ಬಹಳ ಉತ್ತಮ. ವೇದದ ಆದೇಶದ ಪ್ರಕಾರ ಈ ಮಾಘ ಮಾಸದಲ್ಲಿ ಬೆಳಗಿನ ಜಾವದಲ್ಲೇ ಸ್ನಾನ ಮಾಡಬೇಕು. ಆ ಕಾಲದಲ್ಲಿ ವಿಪರೀತ ಚಳಿ ಇರುತ್ತದೆ ಆದರೂ ಧರ್ಮ ನಿಷ್ಠನಾದವನು ಸ್ನಾನ ಮಾಡಲು ಹಿಂಜರಿಯುವುದಿಲ್ಲ ಎಂದು. ಭಗವದ್ಗೀತೆಯಲ್ಲಿ ಇದರ ಉಲ್ಲೇಖವಿದೆ. ಮಾಘ ಮಾಸದಲ್ಲಿ ಮಾಡುವ ಸ್ನಾನಕ್ಕೆ ವಿಧ ವಿಧವಾದ ಕ್ರಮವಿದೆ. ನದಿ ತೀರದಲ್ಲಿ, ಪುಣ್ಯಕ್ಷೇತ್ರದಲ್ಲಿ, ಸಮುದ್ರದಲ್ಲಿ, ಪ್ರಯಾಗದಲ್ಲಿ, ಸ್ನಾನ ಮಾಡಿದರೆ ಏಳೇಳು ಜನುಮದ ಪುಣ್ಯ ಫಲ ಪ್ರಾಪ್ತವಾಗುತ್ತದೆ.ಒಂದು ವೇಳೆ ಈ ಕ್ರಮದಲ್ಲಿ ಸ್ನಾನ ಮಾಡಲು ಕಷ್ಟವಾದರೆ ಮನೆಯಲ್ಲಿಯೇ ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರನ್ನು ಉಪಯೋಗಿಸಿ ಸ್ನಾನ ಮಾಡಬಹುದು. ಸ್ನಾನಕ್ಕೆ ಬಳಕೆಯಾಗುವ ನೀರಿಗೆ ಗಂಗಾಜಲ ಅಥವಾ ತುಳಸಿ ದಳವನ್ನು ಸೇರಿಸಿಕೊಳ್ಳಬೇಕು. ಹಾಗೆ ದರ್ಬೆ, ಅರಶಿನ, ದನದ ಗಂಜಲವನ್ನು ಅದಕ್ಕೆ ಸೇರಿಸಿಕೊಳ್ಳಬಹುದು. ಎಕ್ಕದ ಎಲೆಯನ್ನು ತಲೆಯ ಮೇಲಿಟ್ಟು ಸ್ನಾನ ಮಾಡಿದರೆ ಏಳೇಳು ಜನುಮದ ಪಾಪ ಪರಿಹಾರವಾದಂತೆ ಎಂಬ ನಂಬಿಕೆ ಇದೆ. ಈ ರೀತಿಯಾದ ಸ್ನಾನಕ್ಕೆ ಯಾಕೆ ಪ್ರಾಧಾನ್ಯತೆ ಕೊಡುತ್ತಾರೆಂದರೆ ಪುರಾಣದ ಪ್ರಕಾರ ವಿಷ್ಣು ದೇವರು ಈ ಮಾಘ ಮಾಸದಲ್ಲಿ ನೀರಿನಲ್ಲಿ ನೆಲೆಸಿರುತ್ತಾರೆ. ಎನ್ನುವ ಉಲ್ಲೇಖವಿದೆ
೨. ಮಾಘಮಾಸದಲ್ಲಿ ಶ್ಲೋಕದ ಪರಿಕಲ್ಪನೆ:
ಮಾಘ ಮಾಸದಲ್ಲಿ ಸ್ನಾನ ಮಾಡುವಾಗ ಈ ಶ್ಲೋಕ ಹೇಳುವುದು ಸೂಕ್ತ .
“ದುಃಖ ದಾರಿದ್ರ್ಯ ನಾಶಾಯ ಶ್ರೀ ವಿಷ್ಣೋಸ್ತೋಷಣಾಯಚ ಪ್ರಾತಃ
ಸ್ನಾನಂ ಕರೋ ಮದ್ಯಮಾಘೆ ಪಾಪವಿನಾಶಮ್“.
ಒಂದು ವೇಳೆ ಈ ಶ್ಲೋಕ ಹೇಳುವುದು ಕಷ್ಟವಾದರೆ ಮಾಧವ ಮಾಧವ ಮಾಧವ ಎಂದು ಮೂರು ಬಾರಿ ಉಚ್ಚರಿಸುವುದು. ಅರುಣೋದಯ ಸಮಯದಲ್ಲಿ ಮಾಘಸ್ನಾನ ಮಾಡಿದರೆ ಅವರ ಸಮಸ್ತ ಪಾಪಗಳನ್ನು ನೀರಿನ ಅಭಿಮಾನ ದೇವತೆಗಳು ದೂರ ಮಾಡುತ್ತಾರೆ.ಎನ್ನುವ ನಂಬಿಕೆ ಇದೆ. ಇನ್ನೊಂದು ವಿಶೇಷತೆ ಎಂದರೆ ಮಾಘಸ್ನಾನವನ್ನು ಮಾಡಿದ ವ್ಯಕ್ತಿಗಳ ಪಾಪಗಳನ್ನು ಚಿತ್ರಗುಪ್ತನು ತನ್ನ ಪುಸ್ತಕದಲ್ಲಿ ಅಂತಹ ವ್ಯಕ್ತಿಗಳ ಪಾಪಗಳು ದಾಖಲಾಗಿದ್ದರೆ ಅದನ್ನು ಅಳಿಸಿ ಹಾಕುವನು ಇದು ಯಮನ ಆಜ್ಞೆಯು ಕೂಡ ಆಗಿದೆ ಎನ್ನುವ ನಂಬಿಕೆ ಇದೆ.
೩. ಮಾಘ ಮಾಸದ ದಾನದ ಪರಿಕಲ್ಪನೆ :
ಪದ್ಮ ಪುರಾಣದ ಪ್ರಕಾರ ಈ ಮಾಸದಲ್ಲಿ ಐದು ರೀತಿಯಾದ ದಾನವನ್ನು ಮಾಡಿದರೆ ಪುಣ್ಯ ಸಿಗುತ್ತದೆ ಎನ್ನುವ ಉಲ್ಲೇಖವಿದೆ.
ಅನ್ನದಾನ: ಈ ದಾನ ಮಾಡಿದರೆ ಜನ್ಮ ಜನ್ಮಗಳ ಪಾಪ ಕಳೆಯುತ್ತದೆ.
ವಸ್ತ್ರ ದಾನ: ಈ ದಾನ ಮಾಡಿದರೆ ದಾರಿದ್ರ್ಯ ತೊಲಗುತ್ತದೆ. ಹಣಕಾಸಿನ ವಿಷಯದಲ್ಲಿ ಏಳಿಗೆಯಾಗುತ್ತದೆ.
ಎಳ್ಳಿನ ದಾನ ಅಥವಾ ತಿಲದಾನ: ಒಂದು ಮುಷ್ಟಿಯಷ್ಟು ಎಳ್ಳು ದಾನ ಮಾಡಿದರೆ ಸಾಕು ಸತ್ತ ನಂತರ ಸ್ವರ್ಗ ಪ್ರಾಪ್ತಿಯಾಗುತ್ತದೆ.
ಗೋದಾನ: ಈ ಕಾಲದಲ್ಲಿ ಗೋದಾನ ಮಾಡುವುದು ಸ್ವಲ್ಪ ಕಷ್ಟವೇ ಅದಕ್ಕೆ ಇನ್ನೊಂದು ದಾರಿ ಇದೆ ಮಣ್ಣಿನಿಂದಲೂ ಪಂಚಲೋಹದಿಂದಲೂ ತಾಮ್ರ ಬೆಳ್ಳಿಯಿಂದಲೂ ಯಾವುದಾದರೂ ನಿಮಗೆ ಅನುಕೂಲವಾಗುವ ರೀತಿಯಲ್ಲಿ ಗೋವಿನ ಮೂರ್ತಿಯನ್ನು ಮಾಡಿ ದಾನ ಮಾಡಬೇಕು.
ಈ ಮೇಲಿನ ದಾನ ಪರಿಕಲ್ಪನೆಯಲ್ಲಿ ಸಾಧ್ಯವಾದಷ್ಟು ಯಾವುದು ಅನುಕೂಲಕರವಾಗಿರುತ್ತದೆ ಆ ದಾನವನ್ನು ಮಾಡಿ ಪುಣ್ಯ ಫಲ ಗಳಿಸಿಕೊಳ್ಳುವರಂತಾಗಿ.
ಮಾಘಮಾಸದ ಆಚರಣೆಯ ಪ್ರಯೋಜನಗಳು:
ಮಾಘ ಮಾಸದ ಆಚರಣೆಯಿಂದಾಗಿ ಆರೋಗ್ಯ ವೃದ್ಧಿಯಾಗುತ್ತದೆ:
ನಿಮ್ಮ ಆರೋಗ್ಯ ಸಮತೋಲನದಲ್ಲಿ ಇರಬೇಕಾದರೆ ಈ ಮಾಸದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ ಬೇಗ ಏಳುವುದು ಉತ್ತಮ. ಹಾಗೆ ಎಳ್ಳೆಣ್ಣೆ ಸ್ನಾನ, ಎಳ್ಳಿನ ದಾನ ಮಾಡಬೇಕು. ಎಳ್ಳನ್ನು ದಾನ ಮಾಡುವುದರಿಂದ ಅಕ್ಷಯ ಫಲ ಸಿಗುತ್ತದೆ. ಮುಖ್ಯವಾಗಿ ಎಳ್ಳನ್ನು ಸೇವಿಸುವುದರಿಂದ ಪೋಷಕಾಂಶಗಳು ವರ್ಷವಿಡಿ ನಿಮ್ಮ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ.
ಮಾಘ ಮಾಸದ ಆಚರಣೆಯಿಂದಾಗಿ ಏಕಾಗ್ರತೆ ಹೆಚ್ಚುತ್ತದೆ:
ಈ ಮಾಘ ಮಾಸದಲ್ಲಿ ಭಗವದ್ಗೀತೆಯನ್ನ ಪಠಣ ಮಾಡುವುದು ಅಥವಾ ಆಲಿಸುವುದು ಬಹಳ ಒಳ್ಳೆಯದು. ಏಕೆಂದರೆ ಅದು ಮನಸ್ಸಿನ ಅಜ್ಞಾನವನ್ನು ದೂರ ಮಾಡಿ ಆತ್ಮಜ್ಞಾನವನ್ನು ನೀಡುತ್ತದೆ. ಅಷ್ಟೇ ಅಲ್ಲದೆ ಈ ಮಾಘ ಮಾಸದಲ್ಲಿ ಪ್ರತಿನಿತ್ಯವೂ ವಿಷ್ಣು ಸಹಸ್ರನಾಮವನ್ನು ತಪ್ಪದೇ ಓದಬೇಕು. ಭಗವದ್ಗೀತೆಯನ್ನು ವಿಷ್ಣು ಸಹಸ್ರನಾಮವನ್ನು ಓದುವುದು ಮತ್ತು ಹೇಳುವುದರಿಂದ ನಮ್ಮಲ್ಲಿ ಏಕಾಗ್ರತೆ ಹೆಚ್ಚುತ್ತದೆ .ನಮ್ಮ ಮನಸ್ಥಿತಿ ಸಮತೋಲನದಲ್ಲಿರುತ್ತದೆ ಸಹಜವಾಗಿ ನಮ್ಮಲ್ಲಿ ಸಹನೆ ಹೆಚ್ಚುತ್ತದೆ.
ಮಾಘ ಮಾಸದ ಆಚರಣೆಯಿಂದ ಅದೃಷ್ಟ ಮತ್ತು ಸಂಪತ್ತು ಲಭಿಸುತ್ತದೆ:
ಈ ಮಾಸದಲ್ಲಿ ದೀಪಾರಾಧನೆ ಮಾಡುವುದರಿಂದ ಹಾಗೆ ಅನ್ನದಾನ ವಸ್ತ್ರ ದಾನ ಉಪ್ಪು ಬೆಲ್ಲ ಈಗ ಅವಶ್ಯಕತೆ ಇರುವ ಸಣ್ಣಪುಟ್ಟ ವಸ್ತುವಿನ ದಾನವನ್ನು ನೀಡುವುದರಿಂದ ಎಲ್ಲದಕ್ಕಿಂತ ಮುಖ್ಯವಾಗಿ ಜಗತ್ತಿನಲ್ಲಿ ಅನ್ನದಾನವೇ ಶ್ರೇಷ್ಠದಾನ ಹಾಗಾಗಿ ಈ ಮಾಸದಲ್ಲಿ ನೀವು ಅನ್ನದಾನ ಮಾಡುವುದರಿಂದ ನಿಮಗೆ ಅದೃಷ್ಟ ಸಂಪತ್ತು ಲಭಿಸುತ್ತದೆ.
ಪಾಪಗಳ ನಿವಾರಣೆ ಆಗುತ್ತದೆ:
ಎಕ್ಕದ ಎಲೆಯನ್ನು ತಲೆಯ ಮೇಲಿಟ್ಟು ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದರೆ ನಿಮ್ಮ ಏಳೇಳು ಜನುಮದ ಪಾಪ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ.
ದೇವತೆಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ:
ಈ ಮಾಸದಲ್ಲಿ ವಿಷ್ಣು, ಶಿವ ,ದುರ್ಗಾ, ಲಕ್ಷ್ಮಿ, ದೇವತೆಗಳ ಹಾಗೆ ಸೂರ್ಯನಾರಾಯಣ ದೇವರ ಪೂಜೆಯಿಂದ ಸಕಲ ಶುಭಗಳು ನಿಮಗೆ ಒಲಿಯುತ್ತದೆ ಈ ಎಲ್ಲಾ ದೇವತೆಗಳ ಅನುಗ್ರಹ ನಿಮಗೆ ಪ್ರಾಪ್ತವಾಗುತ್ತದೆ.
ಕೊನೆಯದಾಗಿ ಇನ್ನೊಂದು ಮುಖ್ಯವಾದ ವಿಚಾರವೆಂದರೆ ಮಾಘ ಶುದ್ಧ ಸೃಷ್ಟಿ ಕುಮಾರ ಸೃಷ್ಟಿ. ಸುಬ್ರಹ್ಮಣ್ಯನನ್ನು ಪೂಜಿಸುವ ಕಾಲ ಮದುವೆ ಯೋಗ ಕೂಡಿಬರುವ ಕಾಲ, ಈ ಕಾಲದಲ್ಲಿ ಉಪವಾಸವಿದ್ದು ಸುಬ್ರಹ್ಮಣ್ಯನ ಪೂಜೆ ಮಾಡಿದವರಿಗೆ ಮಕ್ಕಳಾಗದೆ ಕೊರಗುವವರಿಗೆ ಮಕ್ಕಳ ಯೋಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ಮಾಸದಲ್ಲಿ ಮುತ್ತೈದೆಯರಿಗೆ ಬಾಗಿನ ನೀಡುವುದು ಒಳ್ಳೆಯದು. ಇನ್ನೊಂದು ಮುಖ್ಯವಾದ ವಿಚಾರವೇನೆಂದರೆ ಯಾವುದಾದರೂ ವ್ಯವಹಾರವನ್ನು ಆರಂಭ ಮಾಡುವುದಿದ್ದರೂ ಈ ಮಾಸದಲ್ಲಿ ಮಾಡಿದರೆ ಖಂಡಿತ ಒಳ್ಳೆಯದಾಗುತ್ತದೆ. ನಮ್ಮ ಹಿಂದೂ ಪುರಾಣಗಳಲ್ಲಿ ಉಲ್ಲೇಖವಾಗಿರುವ ಇಂತಹ ಧಾರ್ಮಿಕ ಆಚರಣೆಗಳಲ್ಲಿ ವಿಶೇಷವಾಗಿ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಎರಡು ದೃಷ್ಟಿಕೋನಗಳಿದ್ದು ಇಂತಹ ಆಚರಣೆಯನ್ನು ನಾವು ಪರಿಪಾಲನೆ ಮಾಡುವುದರಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ ವಿನಹ ಇದರಿಂದಾಗಿ ಕೆಟ್ಟ ಪರಿಣಾಮವಾಗದು. ಹಾಗಾಗಿ ಈ ಮಾಘಮಾಸದಲ್ಲಿ ಇದುವರೆಗೆ ಅನುಸರಿಸಬೇಕಾದ ಸಂಗತಿಗಳು ಧಾರ್ಮಿಕ ದೃಷ್ಟಿಕೋನದಿಂದಲೂ ,ವೈಜ್ಞಾನಿಕ ದೃಷ್ಟಕೋನದಿಂದಲೂ ಉತ್ತಮದಾಯಕವಾಗಿದೆ.
ಅಪರೂಪದ ಮಾಹಿತಿ
Thank you.