
ಮಹಾಶಿವರಾತ್ರಿ 2026 ಫೆಬ್ರವರಿ 15 ರಂದು ಆಚರಿಸಲ್ಪಡುತ್ತದೆ.ಮಹಾಶಿವರಾತ್ರಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು. ಈ ಹಬ್ಬವನ್ನು ಶಿಶಿರ ಋತುವಿನ ಮಾಘಮಾಸದ ಬಹುಳ ಚತುರ್ದಶಿ ದಿನದಂದು ಆಚರಿಸಲಾಗುವುದು. ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ತುಂಬಾ ಶುಭ ಸಮಯ ಎಂದು ಪರಿಗಣಿಸಲಾಗಿದೆ. ಈ ಪವಿತ್ರ ದಿನದಂದು ಅತ್ಯಂತ ಭಕ್ತಿಯಿಂದ ಶಿವನನ್ನು ಅದರಲ್ಲೂ ರಾತ್ರಿ ಸಮಯದಲ್ಲಿ ಜಾಗೃತಾವಸ್ಥೆಯಲ್ಲಿ ಶಿವನನ್ನು ಭಜಿಸಿದರೆ ಶಿವನ ಅನುಗ್ರಹಕ್ಕೆ ಪಾತ್ರರಾಗುವುದರೊಂದಿಗೆ ಜೀವನದಲ್ಲಿ ಸುಖ ಸಂತೋಷ ಸಮೃದ್ಧಿ ದೊರೆಯುತ್ತದೆ ಎನ್ನುವ ನಂಬಿಕೆ ಇದೆ.
ಮಹಾಶಿವರಾತ್ರಿಯ ಪೌರಾಣಿಕ ಹಿನ್ನೆಲೆ:
ಮಹಾಶಿವರಾತ್ರಿಯ ಆಚರಣೆಯ ಹಿಂದೆ ಕೆಲವು ಪೌರಾಣಿಕ ಕಥಾ ಹಿನ್ನೆಲೆ ಇದೆ ಅವುಗಳು ಹೀಗಿವೆ.
೧. ಶಿವ ಪಾರ್ವತಿಯ ಮದುವೆ:
ಶಿವನನ್ನು ದಕ್ಷ ಪ್ರಜಾಪತಿಯ ಮಗಳಾದ ಸತಿ ದೇವಿ ತಂದೆಯ ವಿರೋಧ ಕಟ್ಟಿಕೊಂಡು ಮದುವೆಯಾಗುತ್ತಾಳೆ. ಮುಂದೆ ಪ್ರಜಾಪತಿ ಒಂದು ದೊಡ್ಡ ಯಜ್ಞವನ್ನು ಮಾಡಿಸುತ್ತಾನೆ. ಆ ಯಜ್ಞಕ್ಕೆ ದೇವಾನು ದೇವತೆಗಳಿಗೆ ಆಹ್ವಾನವಿರುತ್ತದೆ. ಆದರೆ ಶಿವ ಮತ್ತು ಸತಿ ದೇವಿಯವರಿಗೆ ಆಹ್ವಾನ ವಿರುವುದಿಲ್ಲ. ಈ ವಿಷಯ ತಿಳಿದ ಸತಿ ದೇವಿ ಆಹ್ವಾನವಿಲ್ಲದಿದ್ದರೂ ಶಿವನ ವಿರೋಧ ಕಟ್ಟಿಕೊಂಡು ತಂದೆಯ ಮನೆಗೆ ಹೋಗುತ್ತಾಳೆ. ಬಹಳ ಆಸೆಯಿಂದ ಹೊರಟ ಸತಿ ದೇವಿಗೆ ಅಲ್ಲಿ ಅವಮಾನ ಆಗುತ್ತದೆ. ಅವಳ ತಂದೆ ದಕ್ಷ ಪ್ರಜಾಪತಿ ಶಿವನನ್ನು ನಿಂದಿಸುತ್ತಾನೆ. ಆಗ ಅವಳು ಅಗ್ನಿಗೆ ತನ್ನ ದೇಹ ತ್ಯಾಗ ಮಾಡುತ್ತಾಳೆ. ಈ ಸಂದರ್ಭದಲ್ಲಿಯೂ ಆಕೆ ಮುಂದಿನ ಜನ್ಮದಲ್ಲಿ ತಾನು ಪರಶಿವನನ್ನೇ ವರಿಸಿಕೊಳ್ಳುತ್ತೇನೆ ಎಂದು ಸಂಕಲ್ಪ ಮಾಡುತ್ತಾಳೆ. ನಂತರ ಮುಂದಿನ ಜನ್ಮದಲ್ಲಿ ಪರ್ವತರಾಜ ಹಿಮವಂತ ಮತ್ತು ಮೀನಾ ದೇವಿಗೆ ಮಗಳಾಗಿ ಸತಿ ದೇವಿ ಪಾರ್ವತಿಯಾಗಿ ಜನ್ಮ ತಾಳುತ್ತಾಳೆ.
ಇತ್ತ ಸತಿದೇವಿ ಅಗ್ನಿ ಪ್ರವೇಶ ಮಾಡಿ ದೇಹ ತ್ಯಾಗ ಮಾಡಿದ ನಂತರ ಶಿವ ವೈರಾಗಿಯಾಗಿ ತಪಸ್ವಿಯಾಗಿರುತ್ತಾನೆ. ಶಿವನ ವಿಷಯ ತಿಳಿದ ತಾರಕಾಸುರ ಬ್ರಹ್ಮನನ್ನು ಕುರಿತು ತನಗೆ ಸಾವು ಸಂಭವಿಸುವುದಾದರೆ ಶಿವನ ಏಳು ವರ್ಷದ ಪುತ್ರನಿಂದ ಹೊರತು ಬೇರೆ ಯಾರಿಂದಲೂ ಬರಬಾರದು ಎಂದು ಘೋರ ತಪಸ್ಸಿಗೆ ಕುಳಿತು ಬೇಡಿಕೊಳ್ಳುತ್ತಾನೆ. ಈ ವಿಷಯ ತಿಳಿದ ದೇವತೆಗಳು ಶಿವ ಪಾರ್ವತಿಯರ ಮದುವೆ ಮಾಡಲು ಮುಂದಾಗುತ್ತಾರೆ. ಆದರೆ ಶಿವನ ತಪೋ ಭಂಗ ಮಾಡುವ ಧೈರ್ಯ ಯಾರಿಗೂ ಇರುವುದಿಲ್ಲ. ಈ ಕಾರಣದಿಂದ ಮನ್ಮಥನನ್ನು ಶಿವನ ಬಳಿಗೆ ಕಳಿಸುತ್ತಾರೆ. ಮನ್ಮಥ ಶಿವನ ಧ್ಯಾನಕ್ಕೆ ಭಂಗ ತರುತ್ತಾನೆ. ಶಿವ ತನ್ನ ಮೂರನೇ ಕಣ್ಣಿನಿಂದ ಆತನನ್ನ ಭಸ್ಮ ಮಾಡುತ್ತಾನೆ. ನಂತರ ಇರುವ ವಿಚಾರ ತಿಳಿಸಿ ಶಿವ ಪಾರ್ವತಿಯರ ವಿವಾಹ ಕಾರ್ಯ ನೆರವೇರುತ್ತದೆ. ಈ ದಿನವೇ ಶಿವರಾತ್ರಿ. ಶಿವ ಪಾರ್ವತಿಯರ ಮಿಲನದ ರಾತ್ರಿ ವಿನಾಶದ ರಾತ್ರಿ ಸೃಷ್ಟಿಯ ರಾತ್ರಿ ಇದು ಪೌರಾಣಿಕ ರಾತ್ರಿ.
ಸಮುದ್ರ ಮಥನ ನಡೆದ ಸಂದರ್ಭ:
ಸಾತ್ವಿಕ ಶಕ್ತಿಗಳನ್ನು ಮೀರಿ ಅಸುರಿ ಶಕ್ತಿಗಳು ಪ್ರಬಲ ಆಗುತ್ತಿದೆ ಎನ್ನುವ ಕಾರಣಕ್ಕೆ ದೈವಿಶಕ್ತಿಗೆ ಅಮರತ್ವವಾಗಲಿ ಎನ್ನುವ ಕಾರಣಕ್ಕೆ ಒಳ್ಳೆಯದು ಶಾಶ್ವತವಾಗಿ ಉಳಿಯಲಿ ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಮಹಾವಿಷ್ಣುವಿನ ಆದೇಶದಂತೆ ಸಮುದ್ರ ಮಥನದ ಕಾರ್ಯ ಆರಂಭವಾಯಿತು. ಈ ಲೋಕಕಲ್ಯಾಣದ ಕಾರ್ಯಕ್ಕೆ ದೇವತೆಗಳೊಂದಿಗೆ ರಾಕ್ಷಸರನ್ನು ಬಳಸಿಕೊಂಡರು. ಸಮುದ್ರವನ್ನು ಕಡೆಯುವಾಗ ಕಾಮಧೇನು, ಕಲ್ಪವೃಕ್ಷ, ಮಹಾಲಕ್ಷ್ಮಿ ಸಮುದ್ರದಿಂದ ಹೊರ ಬಂದರು. ಇವೆಲ್ಲ ಒಳ್ಳೆಯ ಅಂಶಗಳು ಹೊರಬಂದ ಮೇಲೆ ಇನ್ನೊಂದು ಕೆಟ್ಟ ಸಂಗತಿ ಕೂಡ ಬಂದಿತು. ಅದೇ ಕಾರ್ಕೋಟಕ ವಿಷ.
ದೇವಾನುದೇವತೆಗಳಿಗೆ ಹಾಲಾಹಲದ ಪ್ರಭಾವವನ್ನು ನಿಗ್ರಹಿಸುವವರಾರು ಎನ್ನುವ ಆತಂಕವಾಯಿತು. ದೇವರಾಕ್ಷಸರೆಲ್ಲರಿಗೂ ತಕ್ಷಣ ನೆನಪಾದದ್ದು ಶಿವ. ಶಿವನನ್ನು ಪ್ರಾರ್ಥಿಸಿದಾಗ ಶಿವ ಪ್ರತ್ಯಕ್ಷವಾಗಿ ಸ್ವಲ್ಪವೂ ಯೋಚಿಸದೆ ಹಾಲಾಹಲವನ್ನು ಸೇವಿಸುತ್ತಾನೆ. ಎಲ್ಲರೂ ಗಾಬರಿಯಿಂದ ನೋಡುತ್ತಿರಬೇಕಾದರೆ, ಮಹಾದೇವಿ ಶಿವನು ಅಪಾಯ ತಂದುಕೊಂಡಿದ್ದಾನೆ ಎಂದು ಅಲ್ಲಿಗೆ ತಕ್ಷಣ ಆಗಮಿಸಿ ಶಿವನ ಗಂಟಲನ್ನು ಒತ್ತಿ ಹಿಡಿಯುತ್ತಾಳೆ. ವಿಷ ಅವನ ಗಂಟಲಲ್ಲೇ ಉಳಿಯಿತು. ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನ ಈ ಘಟನೆ ನಡೆದದ್ದು. ಈ ದಿನ ಎಲ್ಲರೂ ಶಿವನನ್ನು ಭಜಿಸಲು ಶುರು ಮಾಡುತ್ತಾರೆ. ಹಾಗಾಗಿ ಈ ದಿನ ಶಿವರಾತ್ರಿ ಎಂದು ಮಹತ್ವವನ್ನು ಪಡೆದಿದೆ.
ಭಗೀರಥ ಗಂಗೆಯನ್ನು ಧರೆಗಿಳಿಸಿದ ದಿನ:
ತನ್ನ ಪಿತೃಗಳಿಗೆ ಮೋಕ್ಷ ಕಲ್ಪಿಸಲು ಗಂಗೆಯನ್ನು ಭೂಮಿಗೆ ತರಬೇಕೆಂದು ಬಯಸಿದವನು ಭಗೀರಥ. ಅವನ ತಪಸ್ಸಿಗೆ ಮೆಚ್ಚಿ ಭೂಮಿಗೆ ಬರಲು ಗಂಗೆ ಒಪ್ಪಿಕೊಳ್ಳುತ್ತಾಳೆ. ಆದರೆ ಅವಳಿಗೆ ಅಹಂಕಾರ ತುಂಬಿರುತ್ತದೆ. ಭಗೀರಥನಲ್ಲಿ ನಾನು ಭೂಮಿಗೆ ರಭಸದಿಂದ ಬರುತ್ತೇನೆ. ನನ್ನನ್ನು ನಿಧಾನಗತಿಯಲ್ಲಿ ಭೂಮಿಗೆ ಇಳಿಸುವ ಪ್ರಯತ್ನವನ್ನು ಮಾಡಬೇಕೆನ್ನುವಂತಹ ಸಲಹೆಯನ್ನು ಸೂಚಿಸುತ್ತಾಳೆ. ಗಂಗೆ ಸಲಹೆ ಮೇರೆಗೆ ಶಿವನನ್ನು ಭಗೀರಥ ಪ್ರಾರ್ಥಿಸುತ್ತಾನೆ. ಶಿವ ಗಂಗೆಯನ್ನು ಧರಿಸುವುದಕ್ಕೆ ಒಪ್ಪಿಕೊಳ್ಳುತ್ತಾನೆ. ದೇವಲೋಕದಿಂದ ರಭಸವಾಗಿ ಬಂದ ಗಂಗೆ ಶಿವನ ಜಟೆಯ ಒಳಗೆ ಪ್ರವೇಶಿಸುತ್ತಾಳೆ. ಗಂಗಾಧರನಾದ ಶಿವ ಆಕೆಯನ್ನು ನಿಧಾನವಾಗಿ ಭೂಮಿಗೆ ಇಳಿಸಿದ್ದು ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷದ ಬಹುಳ ಚತುರ್ದಶಿಯ ದಿನ ಈ ಸಂಭ್ರಮವನ್ನು ಶಿವರಾತ್ರಿ ಹಬ್ಬ ವನ್ನಾಗಿ ಆಚರಿಸುತ್ತಾರೆ.
ಮಹಾಶಿವರಾತ್ರಿಯ ಪೂಜಾ ವಿಧಾನ:
ಮಹಾಶಿವರಾತ್ರಿ ದಿನದಂದು ಸರಳವಾದ, ಕ್ರಮಬದ್ಧವಾದ ಪೂಜೆಗೆ ಮಹತ್ವವಿದೆ.ಅಂತಹ ಪೂಜಾ ವಿಧಾನಗಳು ಹೀಗಿವೆ.
ಬೆಳಗಿನ ಪೂಜಾ ವಿಧಾನ:
ಶಿವರಾತ್ರಿಯ ಪೂಜೆಯನ್ನು ಯಾವುದೇ ಆಡಂಬರವಿಲ್ಲದೆ ಸರಳವಾಗಿ ಮಾಡಬಹುದು. ಬೆಳಗಿನ ಜಾವ ಬೇಗ ಎದ್ದು ಸ್ನಾನ ಮಾಡುವುದು ನಂತರ ಅಭಿಷೇಕ ಪ್ರಿಯನಾದ ಶಿವನ ಲಿಂಗಕ್ಕೆ ಗಂಗಾಜಲದಿಂದ ಅಭಿಷೇಕ ಮಾಡುವುದು ಒಳ್ಳೆಯದು. ಶಿವಲಿಂಗವನ್ನು ಆಕಾಶ ಗಾಳಿ ಬೆಂಕಿ ನೀರು ಮತ್ತು ಭೂಮಿ ಐದು ಅಂಶಗಳ ಸಂಯೋಜನೆ ಎಂದು ಪರಿಗಣಿಸಲಾಗಿದೆ.
ರಾತ್ರಿ ಜಾಗರಣೆ:
ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಲ್ಲಿ ಎಲ್ಲಾ ಹಬ್ಬಗಳು ಹಗಲಿನಲ್ಲಿ ಆಚರಿಸಲ್ಪಟ್ಟರೆ ಶಿವರಾತ್ರಿ ವಿಶೇಷವೇನೆಂದರೆ ರಾತ್ರಿಯ ಪೂಜೆ, ಜಾಗರಣೆ. ಜಾಗರಣೆ ಎಂದರೆ ಶಿವನ ಧ್ಯಾನವನ್ನು ಮಾಡುವುದು. ಮನಸ್ಸನ್ನು ನಿಯಂತ್ರಿಸಿಕೊಂಡು ಶಿವನ ಕಡೆಗೆ ಕೊಂಡೊಯ್ಯಬೇಕು, ಶಿವನ ಸಾನಿಧ್ಯವನ್ನು ಅನುಭವಿಸಬೇಕು.
ಬಿಲ್ವಪತ್ರೆಯ ಮಹಿಮೆ:
ಬಿಲ್ವಪತ್ರೆಯ ಪ್ರಿಯ ಶಿವ. ಶಿವರಾತ್ರಿಯ ಸಂದರ್ಭದಲ್ಲಿ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿ ಪೂಜಿಸುವುದು ಅತ್ಯಂತ ಶ್ರೇಷ್ಠಕರವಾದದ್ದು.
ಹಾಗೆಯೇ ಭಸ್ಮವನ್ನು ಲೇಪಿಸಿಕೊಂಡು ರುದ್ರಪಟನೆ ಮಾಡುವುದು ಬಹಳ ವಿಶೇಷವಾದದ್ದು.
ಮಹಾಶಿವರಾತ್ರಿಯ ಉಪವಾಸದ ಮಹತ್ವ:
ಅಂದರೆ ದೇವರಿಗೆ ತೀರ ಹತ್ತಿರವಾಗಲು ನಮ್ಮ ಮನಸ್ಸನ್ನು ಕೇಂದ್ರೀಕರಿಸಿಕೊಂಡು ಧ್ಯಾನಾಸಕ್ತರಾಗಬೇಕು. ಮನಸ್ಸನ್ನು ಹಿಡಿತದಲ್ಲಿ ಇರಿಸಿಕೊಳ್ಳಲು ಈ ಸಂದರ್ಭದಲ್ಲಿ ಉಪವಾಸ ಮಾಡುವುದು ಒಳ್ಳೆಯದು. ಹಾಗಂತ ಬಲವಂತದಿಂದ ಉಪವಾಸ ಮಾಡುವ ಅಗತ್ಯ ಇಲ್ಲ. ಸಾತ್ವಿಕ ಆಹಾರವನ್ನು ಸೇವಿಸುವುದರಿಂದಲೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಉಪವಾಸದಿಂದಿರುವ ಕಾರಣ ಧ್ಯಾನ ಸಾಧನೆ ಮಾಡಲು ಈ ಪರ್ವ ಕಾಲ ಸೂಕ್ತವಾದದ್ದು.
ಮಹಾಶಿವರಾತ್ರಿಯ ವೈಜ್ಞಾನಿಕ ಮಹತ್ವ:
ಈ ಮಾಘ ಮಾಸದಲ್ಲಿ ಬರುವ ಶಿವರಾತ್ರಿ ಸಂದರ್ಭ ಚಳಿಗಾಲ ಮುಗಿದು ಬೇಸಿಗೆಗಾಲ ಆರಂಭವಾಗುವ ಕಾಲ. ಸೂರ್ಯನ ಶಾಖ ಹದವಾಗಿರುತ್ತದೆ ಚಂದ್ರನ ಪ್ರಕಾಶ ಕ್ಷೀಣ ವಾಗಿರುತ್ತದೆ. ನಮ್ಮ ಶರೀರದಲ್ಲಿ ಹಲವಾರು ಬದಲಾವಣೆಯಾಗುತ್ತದೆ. ಉಸಿರಾಟದ ತೊಂದರೆ ಶೀತ ಕೆಮ್ಮು ಬಾಧೆ ಕಾಡುತ್ತದೆ. ನಮ್ಮನ್ನು ನೈಸರ್ಗಿಕವಾಗಿ ಕಾಪಾಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ. ಹಾಗಾಗಿ ಹಿರಿಯರು ಒಂದಷ್ಟು ಆಚರಣೆಗಳನ್ನು ಅನುಸರಿಸಿದ್ದರು. ಅದಕ್ಕೆ ಭಕ್ತಿಯ ರೂಪವನ್ನು ಕೊಟ್ಟರು.ಬಿಲ್ವಪತ್ರೆಯನ್ನು ಮೂಸುವುದರಿಂದ ಉಸಿರಾಟದ ತೊಂದರೆಯನ್ನು ತಪ್ಪಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ಸಾತ್ವಿಕ ಆಹಾರವನ್ನು ಸ್ವೀಕರಿಸುವುದರಿಂದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.ಈ ಸಂದರ್ಭದಲ್ಲಿ ಶಿವಲಿಂಗ ಶಕ್ತಿಯನ್ನು ಬಿಡುಗಡೆಗೊಳಿಸುತ್ತದೆ. ಶಿವಲಿಂಗದ ಮೇಲೆ ನೀರಿನ ಅಭಿಷೇಕ ಮಾಡುವುದರಿಂದ ಆ ಶಕ್ತಿ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ.ಇನ್ನು ಶಿವ ದೇವಾಲಯಗಳನ್ನು ವಾಸ್ತು ಪ್ರಕಾರದಿಂದ ಕಟ್ಟಿರುತ್ತಾರೆ. ದೇವಾಲಯದಲ್ಲಿ ವಿಶಿಷ್ಟ ಶಕ್ತಿ ಇರುತ್ತದೆ. ಅದೇ ಶಿವಶಕ್ತಿ. ದೇವಾಲಯಕ್ಕೆ ಹೋಗಿ ಮಂತ್ರಗಳನ್ನು ಪಠಿಸಿ ಶಿವನಿಗೆ ಅಭಿಷೇಕ ಮಾಡಿದರೆ ಶಕ್ತಿ ಸಂಚಯವಾಗುತ್ತದೆ.
ಹೀಗೆ ಈ ಮೇಲೆ ಉಲ್ಲೇಖಿಸಿದ ಶಿವರಾತ್ರಿ ಹಬ್ಬದ ಎಲ್ಲ ವಿಶೇಷತೆಗಳನ್ನು ಅರಿತು ಅನುಕರಿಸುವುದರಿಂದ ನಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. ಕ್ರಮಬದ್ಧವಾದಂತಹ ಜೀವನವನ್ನು ನಡೆಸಲು ಇದು ಉತ್ತಮ ಮಾರ್ಗವಾಗುತ್ತದೆ. ಹಾಗಾಗಿ ಶಿವರಾತ್ರಿ ಮಹಿಮೆಯನ್ನು ಅರಿತು ಉಪವಾಸ ಜಾಗರಣೆ ಕ್ರಮಬದ್ಧವಾದ ಪೂಜಾ ವಿಧಾನವನ್ನು ಅನುಸರಿಸಿ ಆ ಒಂದು ದಿನದಲ್ಲಿ ಉತ್ಪತ್ತಿಯಾಗುವ ಎಲ್ಲಾ ವಿಧದ ಸಾತ್ವಿಕ ಶಕ್ತಿಯನ್ನು ಪಡೆಯುವಂತವರಾಗಿರಿ ಎನ್ನುವುದು ಇಲ್ಲಿನ ಆಶಯ.ಮಹಾಶಿವರಾತ್ರಿ 2026 ದಿನದಂದು ಶಿವನ ಆರಾಧನೆ ಮಾಡುದರಿಂದ ಅಪಾರ ಪುಣ್ಯ ಸಿಗುತ್ತದೆ.
? ಮಹಾಶಿವರಾತ್ರಿ 2026 – FAQ
೧.ಮಹಾಶಿವರಾತ್ರಿ 2026 ಯಾವಾಗ?
2026ರಲ್ಲಿ ಮಹಾಶಿವರಾತ್ರಿ ಫೆಬ್ರವರಿ 15ರಂದು ಆಚರಿಸಲಾಗುತ್ತದೆ.
೨.ಮಹಾಶಿವರಾತ್ರಿ ಏಕೆ ಆಚರಿಸಲಾಗುತ್ತದೆ?
ಈ ದಿನ ಶಿವ ಪಾರ್ವತಿಯರ ವಿವಾಹವಾದ ದಿನ, ಭಗೀರಥ ಗಂಗೆಯನ್ನು ಧರೆಗಿಳಿಸಿದ ದಿನ, ಸಮುದ್ರ ಮಥನ ನಡೆದು ಶಿವ ಹಾಲಾಹಲವನ್ನು ಕುಡಿದು ಅಭಯ ನೀಡಿದ ದಿನ
೩.ಮಹಾಶಿವರಾತ್ರಿ ದಿನ ಹೇಗೆ ಉಪವಾಸ ಮಾಡಬೇಕು?
ಅಷ್ಟು ಕಟ್ಟುನಿಟ್ಟಿನ ಉಪವಾಸ ಅಲ್ಲದಿದ್ದರೂ ಸಾತ್ವಿಕ ಆಹಾರವನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
೪.ಮಹಾಶಿವರಾತ್ರಿ ಪೂಜೆಯಲ್ಲಿ ಏನು ಅರ್ಪಿಸಬೇಕು?
ನೀರಿನ ಅಭಿಷೇಕ ಮಾಡುವುದು (ಗಂಗಾಜಲ ಆದರೆ ಉತ್ತಮ), ಬಿಲ್ವಪತ್ರೆಯನ್ನು ಅರ್ಪಿಸುವುದು ಶ್ರೇಷ್ಠ.
೫.ಮಹಾಶಿವರಾತ್ರಿಯ ರಾತ್ರಿ ಜಾಗರಣೆ ಯಾಕೆ ಮಾಡುತ್ತಾರೆ?
ಈ ರಾತ್ರಿ ಜಾಗರಣೆ ಮಾಡುವುದರಿಂದ ಶಿವನ ಸಾನಿಧ್ಯವನ್ನು ಅನುಭವಿಸಬಹುದು.
೬.ಶಿವರಾತ್ರಿ ಪೂಜೆಯ ಶುಭ ಸಮಯ ಯಾವುದು?
ರಾತ್ರಿ ವೇಳೆ ಜಾಗರಣೆ ಕೂತು ಶಿವಲಿಂಗಪೂಜೆಯನ್ನು ಮಾಡುವುದು ಉತ್ತಮವಾದದ್ದು.